ಜಿಲ್ಲೆ

ವಿದ್ಯಾರ್ಥಿಗಳಿಂದ ಲೈಟಿಂಗ್ ಪೆನ್ ಆವಿಷ್ಕಾರ!

ಜಗದೀಶ ಹೊಂಬಳಿ

ಬೆಳಗಾವಿ: ಚನ್ನಮ್ಮನ ಕಿತ್ತೂರು ತಾಲೂಕಿನ ಕತ್ರಿದಡ್ಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ 6 ವಿದ್ಯಾರ್ಥಿಗಳು ‘ಲೈಟಿಂಗ್ ಪೆನ್’ ಆವಿಷ್ಕರಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿಗಳಾದ ಸುದೀಪ ಹತ್ತಿ, ಸುನೀಲ ಮಾಶೇವಾಡಿ, ಗಂಗಪ್ಪ ಹಿಗಣಿ, ಸುದೀಪ ತೋಪಗಾನಿ, ನವೀನ ದೊಡವಾಡ, ಪ್ರೇಮಕುಮಾರ ಹಟ್ಟಿಹೊಳಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಿದೆ. ಇದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಂಶೋಧನೆಗೆ ಮುಂದಾದೆವು. ಎಜ್ಯುಕೇಷನ್ ಇಂಡಿಯಾ ಮತ್ತು ಧಾರವಾಡದ ಸುಕೃತಾ ಮಾತೃ ಸಂಸ್ಥೆ ಪ್ರೋತ್ಸಾಹದಿಂದ ಈ ಸಾಧನ ತಯಾರಿಸಿದ್ದೇವೆ ಎಂದರು.
ಈ ಪೆನ್‌ಗೆ ಲೈಟಿಂಗ್, ಚಾರ್ಜಿಂಗ್ ವ್ಯವಸ್ಥೆ ಇದೆ. 3ಡಿ ಪಿನ್‌ಬಾಕ್ಸ್ ಹೊಂದಿರುವ ಈ ಪೆನ್ ಬಳಸಿ, ವಿದ್ಯಾರ್ಥಿಗಳು ಕತ್ತಲಲ್ಲಿಯೂ ಸರಳವಾಗಿ ಓದು, ಬರಹ ಮುಂದುವರಿಸಬಹುದು. ನಾವು ತಯಾರಿಸಲಿರುವ 10 ಸಾವಿರ ಪೆನ್‌ಗಳ ಖರೀದಿಗೆ ಎಜ್ಯುಕೇಷನ್ ಇಂಡಿಯಾ ಸಂಸ್ಥೆ ಹೂಡಿಕೆ ಮಾಡಿದೆ. ಇವುಗಳನ್ನು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುವ ಉದ್ದೇಶ ಹೊಂದಿದೆ ಎಂದರು. ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಸಂಶೋಧನೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಪರಿಕಲ್ಪನೆಯನ್ನು ಶಿಕ್ಷಕರಿಗೆ ವಿವರಿಸಿದೆವು. ಅವರು ಧಾರವಾಡದ ಸುಕೃತಿ ಮಂತ್ರ ಸಂಸ್ಥೆಯ ಆನಂದ ಕಡಕೋಳ ಅವರನ್ನು ಭೇಟಿಯಾಗುವಂತೆ ಸಲಹೆ ನೀಡಿದರು. ಅವರ ಸಹಾಯದಿಂದ ಹೊಸ ಆವಿಷ್ಕಾರ ಮಾಡಲು ಸಾಧ್ಯವಾಯಿತು. ಈಗ ಎಜ್ಯುಕೇಷನ್ ಇಂಡಿಯಾ ಸಂಸ್ಥೆ ಮುಂದಿನ ಚಟುವಟಿಗಳನ್ನು ಪ್ರೋತ್ಸಾಹಿಸುತ್ತಿದೆ ಎಂದರು.
ಎಜ್ಯುಕೇಷನ್ ಇಂಡಿಯಾ ಸಂಸ್ಥೆ ಅಲೆಗ್ಸಾಂಡರ್ ಪೋರಿಂಚು ಮಾತನಾಡಿ, ಹೊಸ ಸ್ಟಾರ್ಟಪ್‌ಗಳು ಮತ್ತು ಉದಯೋನ್ಮುಖ ಉದ್ಯಮಿಗಳನ್ನು ಬೆಂಬಲಿಸಲು ಬೆಳಗಾವಿಯಲ್ಲಿ ಕಳೆದ ತಿಂಗಳು ಮೇಳ ಆಯೋಜಿಸಿದ್ದೆವು. ಇದರಲ್ಲಿ ಭಾಗವಹಿಸಿದ್ದ ಕತ್ರಿದಡ್ಡಿಯ ವಿದ್ಯಾರ್ಥಿಗಳು ಸಿದ್ಧಪಡಿಸಿದ ಸಾಧನ ಗಮನ ಸೆಳೆಯಿತು. ಹಾಗಾಗಿ ಹಳ್ಳಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಬಹುದಾದ ಈ ಸಾಧನದ ಸಂಶೋಧನೆ, ಅಭಿವೃದ್ಧಿ ಮತ್ತು ಮಾರುಕಟ್ಟೆ ಚಟುವಟಿಕೆಗೆ ನಮ್ಮ ಸಂಸ್ಥೆಯಿಂದ 20 ಲಕ್ಷ ರೂ. ನೆರವು ಒದಗಿಸಿದ್ದೇವೆ. 10 ಸಾವಿರ ಪೆನ್‌ಗಳ ಖರೀದಿಗೆ ಬೇಡಿಕೆ ಸಲ್ಲಿಸಿದ್ದೇವೆ ಎಂದರು.
ಕಾಶೀನಾಥ ಕೊಪ್ಪದ ಅರ್ಕಾ ಸೈಯದ್ ಸುದ್ದಿಗೋಷ್ಠಿಯಲ್ಲಿದ್ದರು.