ಜಿ.ನಾಗರಾಜ್ ಬೂದಿಕೋಟೆ
ಆಲೂಗಡ್ಡೆ ಕೊಯ್ಲಿಗೆ ಅನುಕೂಲವಾಗಲೆಂದು ಬೂದಿಕೋಟೆ ಕೃಷಿ ಯಂತ್ರಧಾರೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಿಬ್ಬಂದಿ ವಿನೂತನ ಮಾದರಿಯ ನೇಗಿಲೊಂದನ್ನು ಆವಿಷ್ಕಾರ ಮಾಡುವ ಮೂಲಕ ರೈತರಿಗೆ ಕಡಿಮೆ ಖರ್ಚಿನಲ್ಲಿ ಆಲೂಗಡ್ಡೆ ಕೊಯ್ಲಿಗೆ ಉತ್ತಮ ಸಾಧನವೊಂದನ್ನು ನೀಡಿದ ಹೆಮ್ಮೆಗೆ ಪಾತ್ರರಾಗಿದ್ದಾರೆ.
ಬೂದಿಕೋಟೆ ಗ್ರಾಮದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆರಂಭದಲ್ಲಿ ಸರ್ಕಾರದಿಂದ 50 ಲಕ್ಷ ರೂ. ಅನುದಾನ ಪಡೆದು ಸಂಸ್ಥೆಯಿಂದ 25 ಲಕ್ಷ ರೂ. ಹೂಡಿಕೆ ಮಾಡಿ ಒಟ್ಟು 75 ಲಕ್ಷ ರೂ. ವೆಚ್ಚದಲ್ಲಿ 2024ರಲ್ಲಿ ಕೃಷಿ ಯಂತ್ರಧಾರೆ ಹೆಸರಲ್ಲಿ ಯೋಜನೆ ಆರಂಭಿಸಿತ್ತು. ಆರಂಭದಿಂದಲೂ ಸಹ ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಕೃಷಿ ಕೆಲಸಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಟ್ರ್ಯಾಕ್ಟರ್, ಟಿಲ್ಲರ್, ನಾಟಿಯಂತ್ರ, ಗುಳಿ ತೆಗೆಯುವ ಯಂತ್ರ, ಬಹು ಬೆಳೆ ಒಕ್ಕಣೆಯಂತ್ರ ಮುಂತಾದ ಆಧುನಿಕ ಯಂತ್ರೋಪಕರಣ ಒದಗಿಸಲಾಗುತ್ತಿತ್ತು. ಕೇಂದ್ರದಲ್ಲಿ ಸಿಗುವ ಅತ್ಯಾಧುನಿಕ ಯಂತ್ರ ಖಾಸಗಿಯವರಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದ್ದು, ಆರಂಭದಿಂದಲೂ ಕೇಂದ್ರವು ಸಕಾಲದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಯಂತ್ರೋಪಕರಣಗಳನ್ನೂ ಒದಗಿಸುತ್ತಾ ರಾಜ್ಯದಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿರುವುದು ವಿಶೇಷ.
ಈಗ ಇದೇ ಕೇಂದ್ರದ ಮೂಲಕ ಆಲೂಗಡ್ಡೆ ಬಿತ್ತನೆ ಮತ್ತು ಕೊಯ್ಲಿಗೆ ಅನುಕೂಲವಾಗಲಿ ಎಂದು ಕೃಷಿ ಯಂತ್ರಧಾರೆಯ ಮ್ಯಾನೇಜರ್ ಮುಜಾಯಿದ್ ಸ್ಥಳಿಯವಾಗಿ ಸಣ್ಣ ಟ್ರ್ಯಾಕ್ಟರ್ಗೆ ಜೋಡಿಸುವಂತಹ ನೇಗಿಲೊಂದನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಆವಿಷ್ಕಾರ ಮಾಡಿದ್ದಾರೆ. ಈ ನೇಗಿಲು ಬಳಸಿಕೊಂಡು ಸರಳವಾಗಿ ಮತ್ತು ಗುಣಮಟ್ಟದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಬಹುದಾಗಿದೆ. ಹಾಗೆಯೇ ಕೊಯ್ಲಿನ ಸಮಯದಲ್ಲೂ ಇದೇ ನೇಗಿಲನ್ನು ಬಳಸಿ ಸಮಯ ಹಾಗೂ ವೆಚ್ಚವನ್ನು ಉಳಿಸಬಹುದಾಗಿದೆ. ಈಗಾಗಲೇ ಬೇರೆ ರೀತಿಯಲ್ಲಿ ಬಿತ್ತನೆ ಮಾಡಿದ ತೋಟವನ್ನು ಸಹ ಈ ನೇಗಿಲಿನ ಮೂಲಕ ಸರಳ ವಿಧಾನದಲ್ಲಿ ಕೊಯ್ಲು ಮಾಡಬಹುದಾಗಿದೆ. ಈ ನೇಗಿಲಿನಲ್ಲಿ ಆಲೂಗಡ್ಡೆಗೆ ಹಾನಿಯಾಗದಂತೆ ಭೂಮಿಯಿಂದ ಹೊರತೆಗೆಯಬಹುದಾಗಿದೆ ಹಾಗೂ ಶೀಘ್ರ ಕೊಯ್ಲು ಮಾಡಬಹುದಾಗಿದೆ.
ಜಿಲ್ಲೆಯ ರೈತರು ಟೊಮ್ಯಾಟೊ ಬೆಳೆಯ ಜತೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯುತ್ತಿದ್ದು, ಬಿತ್ತನೆಯಿಂದ ಕೊಯ್ಲಿನವರೆಗೂ ಆರೈಕೆಗೆ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಕೆಲವೊಮ್ಮೆ ಆಲೂಗಡ್ಡೆಗೆ ಉತ್ತಮ ಬೆಲೆ ಇದ್ದರೆ, ಇನ್ನು ಕೆಲವೊಮ್ಮೆ ಬೆಲೆಯಿಲ್ಲದೆ ರೈತರು ನಷ್ಟಕ್ಕೆ ಒಳಗಾಗುವುದು ಸಾಮಾನ್ಯವಾಗಿದೆ. ಭೂಮಿಯಲ್ಲಿ ಬಿತ್ತನೆ ಮಾಡಿದ ಆಲೂಗಡ್ಡೆಯನ್ನು ಕೊಯ್ಲು ಮಾಡಲು ನೇಗಿಲು ಅಥವಾ ಕೂಲಿಕಾರರ ನೆರವು ಬೇಕಾಗುತ್ತದೆ. ಇದಕ್ಕೆ ಸಾವಿರಾರು ರೂ. ಖರ್ಚು ಸಹ ಬರುತ್ತದೆ.
ಮೆಚ್ಚುಗೆ: ಇದರಿಂದ ಹೆಚ್ಚಿನ ವೆಚ್ಚವನ್ನು ಕಡಿಮೆ ಮಾಡುವುದರ ಜತೆಗೆ ಭೂಮಿ ಹದಗೊಳಿಸಿದಂತೆ ಮಾಡಲಾಗುತ್ತದೆ. ಸಣ್ಣ ಟ್ರ್ಯಾಕ್ಟರ್ಗೆ ಜೋಡಿಸಿದ ನೇಗಿಲಿನಿಂದ ಕೊಯ್ಲು ಮಾಡುವಂತಹ ಬೆಳೆಯನ್ನು ಸುಮಾರು 50 ಕೂಲಿಕಾರರು ಗಡ್ಡೆಯನ್ನು ತೆಗೆಯಬೇಕಾಗುತ್ತದೆ. ಅಷ್ಟರಮಟ್ಟಿಗೆ ನೇಗಿಲು ಕೆಲಸ ಮಾಡಲಿದ್ದು, ಈಗಾಗಲೇ ತಾಲೂಕಿನ ಹಲವು ರೈತರು ನೇಗಿಲನ್ನು ಬಳಸಿಕೊಂಡು ಆಲೂಗಡ್ಡೆ ಕೊಯ್ಲು ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಲೂಗಡ್ಡೆ ಬೆಳೆಗೆ ಅನುಕೂಲ ಆಗಲೆಂದು ಸ್ಥಳಿಯವಾಗಿ ಸಣ್ಣ ಟ್ರ್ಯಾಕ್ಟರ್ನ ನೇಗಿಲೊಂದನ್ನು ಆವಿಷ್ಕಾರ ಮಾಡಲಾಗಿದ್ದು, ಇದರಿಂದ ಶೀಘ್ರ ಬಿತ್ತನೆ ಮಾಡುವುದರ ಜತೆಗೆ ಸರಳವಾಗಿ ಕೋಯ್ಲು ಮಾಡಬಹುದಾಗಿದೆ. ಸದ್ಯ ಗಂಟೆಗೆ 700 ರೂ.ನಂತೆ ಬಾಡಿಗೆಗೆ ಯಂತ್ರ ಲಭ್ಯವಿದ್ದು, ಹೆಚ್ಚಿನ ರೈತರು ಇದರ ಅನುಕೂಲ ಪಡೆಯಲು ಮುಂದಾಗಿದ್ದಾರೆ. ಮುಂದೆ ರೈತರಿಗೆ ಅನುಕೂಲವಾಗುವಂತೆ ದರ ಪರಿಷ್ಕರಣೆ ಮಾಡಲಾಗುತ್ತದೆ. - ಮುಜಾಯಿದ್, ಮ್ಯಾನೇಜರ್, ಕೃಷಿ ಯಂತ್ರಧಾರೆ ಬೂದಿಕೋಟೆ ಆಲೂಗಡ್ಡೆ ಬೆಳೆ ಕೊಯ್ಲಿಗೆ ದೇಸಿ ನೇಗಿಲೊಂದನ್ನು ಕೃಷಿ ಯಂತ್ರಧಾರೆ ಆವಿಷ್ಕಾರ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಇದರಿಂದ ಕೂಲಿಯಾಳುಗಳ ಸಮಸ್ಯೆ ನೀಗಿಸಲು ಮತ್ತು ಉತ್ತಮ ವಿಧಾನದಲ್ಲಿ ಆಲೂಗಡ್ಡೆಯನ್ನು ಕೊಯ್ಲು ಮಾಡಲು ತುಂಬಾ ಅನುಕೂಲಕರವಾದ ಸಾಧನವಾಗಿದೆ. - ಪ್ರತಿಭಾ ಸಹಾಯಕ ಕೃಷಿ ನಿರ್ದೇಶಕರು ಬಂಗಾರಪೇಟೆ