ಜಿಲ್ಲೆ

ಸಾಲು ಮರದ ತಿಮ್ಮಕ್ಕನ ಆದರ್ಶ ಮಕ್ಕಳಿಗೆ ತಿಳಿಸಿ

ಕಿಕ್ಕೇರಿ: ಮಕ್ಕಳ ಮನಸ್ಸಿನಲ್ಲಿ ಸಾಲುಮರದ ತಿಮ್ಮಕ್ಕನ ಆದರ್ಶ ಬಿತ್ತಿದರೆ ಪರಿಸರ ಸಂರಕ್ಷಣೆಗೆ ಪೀಠಿಕೆಯಾಗಲಿದೆ ಎಂದು ಆಯುಷ್ ವೈದ್ಯಾಧಿಕಾರಿ ಡಾ. ಚಂದ್ರಶೇಖರ್ ತಿಳಿಸಿದರು.


ಸಮೀಪದ ಮಂದಗೆರೆ ಹೇಮಾವತಿ ಪ್ರೌಢಶಾಲೆಯಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಏರ್ಪಡಿಸಿದ್ದ ವಿಶ್ವ ದಿನ ಕಾರ್ಯಕ್ರಮದಲ್ಲಿ ಮಾತನಾದ ಅವರು, ಶುದ್ಧ ಗಾಳಿ ಇಲ್ಲದೆ ಜೀವರಾಶಿ ಉಳಿಯಲಾರದು. ಆರೋಗ್ಯ ಬೇಕಿದ್ದರೆ ಮರಗಿಡ ಬೆಳೆಸಿ ಉಳಿಸಿ. ಮಕ್ಕಳ ಹೆಸರಿನಲ್ಲಿ ಗಿಡನೆಟ್ಟು ಪೋಷಿಸಲು ಸಹಕರಿಸಿ ಎಂದರು.


ಮುಖ್ಯ ಶಿಕ್ಷಕ ಎನ್.ಇ.ಶೇಖರ್ ಮಾತನಾಡಿ, ಜಮೀನಿನಲ್ಲಿ ಮರ ಎನ್ನುವ ಕಾಯಕದ ಮನಸ್ಸು ಹಿರಿಯರಿಂದ ಕಿರಿಯರವರೆಗೆ ಮೂಡಲಿ. ಮರ ಗಿಡವಿದ್ದಲ್ಲಿ ವಾತಾವರಣ ತಂಪಾಗಲಿದೆ. ಸಕಾಲಕ್ಕೆ ಮಳೆ, ಬೆಳೆ ಎಲ್ಲವೂ ಸಿಗಲಿದೆ ಎಂದು ಹೇಳಿದರು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರವೀಣ್ ಮಾತನಾಡಿದರು. ಪರಿಸರ ಕುರಿತು ಆಯೋಜಿಸಿದ್ದ ಚಿತ್ರಕಲೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಆವರಣದಲ್ಲಿ ಗಿಡ ನೆಟ್ಟು ನೀರೆರಲಾಯಿತು. ಪರಿಸರ ಸಂರಕ್ಷಣೆಗೆ ಮರ ಗಿಡಗಳನ್ನು ಬೆಳೆಸುವ ಪ್ರತಿಜ್ಞೆಯನ್ನು ಮಕ್ಕಳು ಮಾಡಿದರು.
ಇಂದ್ರೇಶ್, ಮುಕುಂದ, ರಾಜಶೇಖರ್, ಲಲಿತಾ ಬಾಯಿ, ಮೇಲ್ವಿಚಾರಕಿ ರೇಣುಕಾ, ಕಲಾವತಿ ಹಾಜರಿದ್ದರು.