ಜಿಲ್ಲೆ

ಕಾರ್ಮಿಕ ಸಂಘಟನೆಯ ನಾಯಕರು ವಿಧಾನಸಭೆಗೆ ಆಯ್ಕೆಯಾಗಲಿ: ಐಎನ್‌ಟಿಯುಸಿ ರಾಜ್ಯ ಸಮಿತಿ ಅಧ್ಯಕ್ಷ ಡಾ.ಲಕ್ಷ್ಮಿವೆಂಕಟೇಶ್ ಅಭಿಮತ

ಮೈಸೂರು: ಕಾರ್ಮಿಕರ ಸಮಸ್ಯೆಗಳ ಕುರಿತು ಧ್ವನಿ ಎತ್ತಲು ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲಿ ಕಾರ್ಮಿಕ ಸಂಘಟನೆಯ ನಾಯಕರೊಬ್ಬರು ಚುನಾಯಿತರಾಗಿಬೇಕು ಎಂದು ಐಎನ್‌ಟಿಯುಸಿ ರಾಜ್ಯ ಸಮಿತಿ ಅಧ್ಯಕ್ಷ ಡಾ.ಲಕ್ಷ್ಮಿವೆಂಕಟೇಶ್ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಘಟಿಕೋತ್ಸವ ಭವನದಲ್ಲಿ ಬುಧವಾರ ಟಿವಿಎಸ್ ಮೋಟಾರ್ ಕಂಪನಿ ಉದ್ಯೋಗಿಗಳ ಸಂಘದ 25 ವರ್ಷದ ಅಂಗವಾಗಿ ಆಯೋಜಿಸಿದ್ದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಯಾವುದೇ ರಾಜ್ಯವಾಗಲಿ ಯೂನಿಯನ್ ನಾಯಕರೊಬ್ಬರು ವಿಧಾನಸಭೆಯಲ್ಲಿ ಇರಬೇಕೆಂಬುದು ನಮ್ಮ ಒತ್ತಾಯವಾಗಿದೆ. ಯೂನಿಯನ್ ಅಧ್ಯಕ್ಷ ಕುಪ್ಪೇಸ್ವಾಮಿ ಅವರಿಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ನೀಡುವಂತೆ ಒತ್ತಡ ಹೇರಲಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಅವರ ಕನಸು ನನಸು ಮಾಡಬೇಕಿದೆ ಎಂದು ಹೇಳಿದರು.

ಕಾರ್ಮಿಕರಿಗೆ ಹೆಚ್ಚಿನ ಲಾಭ ನೀಡುವ ಟಿವಿಎಸ್ ಸಂಸ್ಥೆ ಕಾರ್ಯ ಶ್ಲಾಘನೀಯ. ಅದರಲ್ಲೂ ಟಿವಿಎಸ್ ಕಂಪನಿಯ ಕಾರ್ಮಿಕರು ಒಗ್ಗಟ್ಟಾಗಿ ಯಾವುದೇ ತೊಂದರೆ, ಗಲಾಟೆಗೆ ಅವಕಾಶ ನೀಡದೆ ಶಿಸ್ತುಬದ್ಧವಾಗಿ ನಡೆಯುತ್ತಿದ್ದೀರಿ. ಸಂಸ್ಥೆಯೂ ಅಷ್ಟೇ ಕಾರ್ಮಿಕರ ಪರವಾಗಿ ನಡೆಯುವ ಮೂಲಕ ಇತರರಿಗೆ ಮಾದರಿಯಾಗಿದೆ. ಇಂತಹ ಬೆಳವಣಿಗೆ ಎಲ್ಲ ಸಂಸ್ಥೆಗಳಲ್ಲಿಯೂ ಆಗಬೇಕಿದೆ ಎಂದು ಹೇಳಿದರು.

ಐಎನ್‌ಟಿಯುಸಿ ರಾಷ್ಟ್ರೀಯ ಕಾರ್ಯದರ್ಶಿಯಾದ ಟಿವಿಎಸ್ ಮೋಟಾರ್ ಕಂಪನಿ ಉದ್ಯೋಗಿಗಳ ಸಂಘದ ಅಧ್ಯಕ್ಷ ಆರ್.ಕುಪ್ಪಸ್ವಾಮಿ ಮಾತನಾಡಿ, 48 ದಿನ ಪೂರ್ಣಗೊಳಿಸಿದ ಕಾರ್ಮಿಕರನ್ನು ಖಾಯಂ ಮಾಡಬೇಕು ಎಂಬ ಕಾನೂನಿನಲ್ಲಿದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದಲೇ ಯಾವುದೇ ಕಾನೂನು ಪಾಲನೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರಗಳಲ್ಲೇ ನೌಕರಿ ಕಾಯಂ ಮಾಡುವ ಕೆಲಸ ಮಾಡುತ್ತಿಲ್ಲ. ಇನ್ನೂ ಖಾಸಗಿ ಸಂಸ್ಥೆಗಳಲ್ಲಿ ಕಾಯಂ ಬಗ್ಗೆ ಪ್ರಶ್ನೆ ಮಾಡುವ ಧೈರ್ಯ ಕಾರ್ಮಿಕರಿಗೆ ಇಲ್ಲವಾಗಿದೆ. ಇಂತಹ ಸ್ಥಿತಿಯಲ್ಲಿ ಕೇಂದ್ರ ಕಾರ್ಮಿಕ ಕಾಯಿದೆ ತಿದ್ದುಪಡಿ ಮಾಡಿರುವುದು ಕಾರ್ಮಿಕರಿಗೆ ವಿರುದ್ಧವಾಗಿದೆ. ಎಲ್ಲ ನಿಯಮಗಳು ಮಾಲೀಕರ ಪರವಾಗಿದೆ ಎಂದು ಹೇಳಿದರು.

ಇದೇ ವೇಳೆ ಕೆಲವು ಕಾನೂನುಗಳಿಂದಾಗಿ ಕಾರ್ಮಿಕರಿಗೆ ಸೌಲಭ್ಯಗಳು ಸಿಗುತ್ತಿವೆ. ಈ ನಿಟ್ಟಿನಲ್ಲಿ ಟಿವಿಎಸ್ ಕಂಪನಿ ಕಾರ್ಮಿಕರ ಪರವಾಗಿ ಅನೇಕ ಸೌಲಭ್ಯಗಳನ್ನು ಒದಗಿಸಿದೆ. ಇದರ ಪರಿಣಾಮವಾಗಿ 25 ವರ್ಷಗಳನ್ನು ಕಾರ್ಮಿಕರ ಸಂಘ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರ ಸಂಭ್ರಮದಲ್ಲಿ ನಾವಿದ್ದೇವೆ. ಇದಕ್ಕೆ ಕಾರ್ಮಿಕರ ಒಗ್ಗಟ್ಟಿನ ಪರಿಶ್ರಮವೇ ಕಾರಣ ಎಂದರು.

ಇದೇ ವೇಳೆ ಸಾಧಕ ಕಾರ್ಮಿಕರು, ನೂತನ ಪದಾಧಿಕಾರಿಗಳು ಹಾಗೂ ಸಾಧಕ ಕಾರ್ಮಿಕರ ಮಕ್ಕಳನ್ನು ಸನ್ಮಾನಿಸಲಾಯಿತು. ಅಲ್ಲದೆ ಅಂಗಾಂಗ ದಾನ ಮಾಡಿದ ಕಾರ್ಮಿಕನ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಸಂಘದಿಂದ ವಿತರಿಸಲಾಯಿತು.

ಕಾರ್ಖಾನೆಯ ತೋಟಗಾರಿಕೆ ವಿಭಾಗದ ಶಿವಕುಮಾರ್, ಮ್ಯಾರಥಾನ್ ವಿಭಾಗದ ಎಂ.ಎಸ್.ಶಿವಣ್ಣ, ಬುಕ್ ಆಫ್ ರೆಕಾರ್ಡ್ಸ್ ವಿಭಾಗದಿಂದ ಎಂ.ನಾಗರಾಜು ಅವರನ್ನು ಸನ್ಮಾನಿಸಲಾಯಿತು. ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ಐಎನ್‌ಟಿಯುಸಿ ಮಾಜಿ ಅಧ್ಯಕ್ಷ ಎಂ.ಎನ್.ಅಡ್ಯಂತಾಯ, ಟಿವಿಎಸ್ ಕಂಪನಿ ಸಿಇಒ ಡಾ.ಕೆ.ಎನ್.ರಾಧಾಕೃಷ್ಣನ್, ಮೈಸೂರು ಘಟಕದ ಉಪಾಧ್ಯಕ್ಷ ಎಸ್.ಅರುಣ್ ಕುಮಾರ್, ಖಜಾಂಚಿ ಎಂ.ಮಹದೇವಸ್ವಾಮಿ, ಕಾರ್ಯದರ್ಶಿ ಎನ್.ರಾಜಶೇಖರ್, ಸಹಕಾರ್ಯದರ್ಶಿ ಬಸಪ್ಪ ಇತರರು ಇದ್ದರು.