ಜಿಲ್ಲೆ

ಮಾತಾಡ್​ ಮಾತಾಡ್​ ಕನ್ನಡ: ಭಾಷಾ ಪ್ರಭೇದಗಳ ಪರಿಚಯ

ರಮೇಶ್​ ಕುಮಾರ್​​ ಬಿ ಎಡಮೋಳೆ

ಭಾಷೆಗೂ ಮತ್ತು ಆ ಭಾಷೆ ಬಳಸುವ ಜನಾಂಗಕ್ಕೂ ಅವರು ಬದುಕುವ ಸಮಾಜಕ್ಕೂ ಅವಿನಾಭಾವ ಸಂಬಂಧವಿದೆ. ಮನುಷ್ಯನ ಆಲೋಚನೆ, ಅಭಿವ್ಯಕ್ತಿಯ ಕ್ರಮದಲ್ಲಿ ಅವರ ಭಾಷೆ ಮಹತ್ವದ ಪಾತ್ರ ವಹಿಸುತ್ತದೆ. ಸುದೀರ್ ಚರಿತ್ರೆಯಿರುವ ಕನ್ನಡ ಭಾಷೆ ಕಾಲಾಂತರದಲ್ಲಿ ಪ್ರಾದೇಶಿಕ ಕನ್ನಡಗಳಾಗಿ ರೂಪುಗೊಂಡಿದೆೆ. ಪದಗಳ ಬಳಕೆ, ಉಚ್ಚಾರಣೆ, ಅರ್ಥದಲ್ಲಿ ವ್ಯತ್ಯಾಸವಿದೆ. ನಾಡಿನಾದ್ಯಂತ ಸಿಗುವ ಅಂಥ ಉಪ ಭಾಷೆಗಳು ಅವುಗಳದೇ ಆದ ಸೊಗಡನ್ನು ಹೊಂದಿವೆ. ಅವೆಲ್ಲವೂ ಕನ್ನಡವೇ ಅಥವಾ ಕನ್ನಡದ ಪ್ರಭೇದಗಳೇ. ಅಲ್ಲಿ ಸರಿ&ತಪ್ಪು ಎಂಬ ವಿಮರ್ಶೆ ಅನಗತ್ಯ. ವಿದ್ಯಾವಂತರು, ಮೇಲ್ವರ್ಗದವರು ಬಳಸುವ ಕನ್ನಡ ಮಾತ್ರ ಸರಿಯಾದುದು ಎಂಬ ಭಾವನೆಯೂ ಸರಿಯಲ್ಲ. ಯಾರೇ ಬಳಸುವ ಕನ್ನಡ ಒಂದು ಪ್ರಭೇದ ಎಂದು ಭಾವಿಸಿ ಅವುಗಳನ್ನು ತಿಳಿದು ಬಳಸುವ ಮೂಲಕ ನಮ್ಮ ಜ್ಞಾನ ವೃದ್ಧಿ ಮಾಡಿಕೊಳ್ಳುವುದು ಸರಿಯಾದ ದಾರಿ. ಪ್ರದೇಶವಾರು ಪ್ರಚಲಿತವಿರುವ ಅಂಥ ಉಪಭಾಷೆಗಳ ವೈವಿಧ್ಯವನ್ನು ನವೆಂಬರ್​ ಎಂಬ ಈ ಕನ್ನಡ ತಿಂಗಳಲ್ಲಿ ದಾಖಲಿಸುವ ಪ್ರಯತ್ನವಿದು.

ಧಾರವಾಡ ಕನ್ನಡ

ಧಾರವಾಡ ಕನ್ನಡ ಅಂದರೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಾತನಾಡುವ ಭಾಷೆ. ಇಲ್ಲಿಯ ಬದುಕಿನ ಭಾಗವಾದ ಕಟಕ್​ ರೊಟ್ಟಿಯ ಹಾಗೆ ಖಡಕ್​ ಆಗಿರುವ ಭಾಷೆ. ಇತಿಹಾಸದಲ್ಲಿ ಧಾರವಾಡ ಮರಾಠರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಮರಾಠಿ ಭಾಷೆಯ ಪ್ರಭಾವವನ್ನೂ ಜೀರ್ಣಿಸಿಕೊಂಡಿದೆ. ಮೈಸೂರು ಪ್ರಾಂತ್ಯದಲ್ಲಿ "ಎ'ಕಾರಾಂತವಾಗಿ ಉಚ್ಚರಿಸಲ್ಪಡುವ ಶಬ್ದಗಳು ಧಾರವಾಡ ಪ್ರಾಂತ್ಯದಲ್ಲಿ "ಇ'ಕಾರಾಂತವಾಗುತ್ತವೆ. "ಉ'ಕಾರದಿಂದ ಅಂತ್ಯವಾಗುವ ಪದಗಳು "ಅ'ಕಾರವಾಗುತ್ತವೆೆ.

ಉತ್ತರ ಕರ್ನಾಟಕದಲ್ಲಿ ಪ್ರತಿ ಹತ್ತು ಕಿಮೀ ಅಂತರದಲ್ಲಿ ಭಾಷೆಯಲ್ಲಿ ವ್ಯತ್ಯಾಸ ಗಮನಿಸಬಹುದು. ಧಾರವಾಡದಿಂದ ಬೆಳಗಾವಿಯತ್ತ ಹೊರಟರೆ ಒಂದು ಭಾಷೆ, ಹಾವೇರಿಯತ್ತ ಹೊರಟರೆ ಮತ್ತೊಂದು ಭಾಷೆ ಕೇಳಲು ಸಿಗುತ್ತದೆ. ಇನ್ನು, ಧಾರವಾಡದ ಬ್ರಾಹ್ಮಣ ಸಮುದಾಯದವರು ಬಳಸುವ ಭಾಷೆಯನ್ನು ಸುಲಭವಾಗಿ ಗುರುತಿಸಬಹುದಾಗಿದೆ.

ಉದಾ: ಐತಿ-ಅದ, ಬರ್ತೇತಿ- ರ್ಬತದ, ಹೊಂಟೇತಿ - ಹೋಗ್ತದ, ಬರಾಕತ್ತೇನಿ - ಬರ್ಲಿಕತ್ತೀನಿ, ಅದಾನ - ಇದ್ದಾನ...ಇತ್ಯಾದಿ.