ಜಿಲ್ಲೆ

ಹಬ್ಬಗಳಿಂದಲೇ ಭಾರತದ ಸಂಸ್ಕೃತಿಯ ಪರಿಚಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಹಬ್ಬ-ಹರಿದಿನಗಳ ಆಚರಣೆಯಿಂದ ಮಕ್ಕಳಿಗೆ ಭಾರತೀಯ ಸಂಸ್ಕೃತಿ ಪರಿಚಯವಾಗುತ್ತದೆ. ಮಕರ ಸಂಕ್ರಾಂತಿ ಹಬ್ಬ ಸೂರ್ಯನಿಗೆ ಸಮಪಿರ್ತವಾದ ಹಬ್ಬ. ಇದು ಸಮೃದ್ಧಿಯ ಸಂಕೇತ. ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸಿ ಮಕರ ರಾಶಿಗೆ ಪ್ರವೇಶಿಸುವುದರಿಂದ ಈ ಹಬ್ಬವನ್ನು ಮಕರ ಸಂಕ್ರಮಣ ಎನ್ನಲಾಗುತ್ತದೆ ಎಂದು ಜೆಎಸ್​ಎಸ್​ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ನಗರದ ವಿದ್ಯಾಗಿರಿಯ ಜೆಎಸ್​ಎಸ್​ನ ಶ್ರೀ ಮಂಜುನಾಥೇಶ್ವರ ಸಿಬಿಎಸ್​ಇ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಅವರು ಮಾತನಾಡಿದರು.

ಸಂಕ್ರಾಂತಿ ಹಬ್ಬ ಧಾಮಿರ್ಕವಾಗಿ ಅಲ್ಲದೇ, ವೈಜ್ಞಾನಿಕ ದೃಷ್ಟಿಕೋನದಿಂದಲೂ ಪ್ರಾಮುಖ್ಯತೆ ಪಡೆದಿದೆ. ಇದು ಸಂಬಂಧಗಳನ್ನು ಬೆಸೆಯುವ ಹಬ್ಬ. ಸಿಹಿ ಹಂಚುವ ಮೂಲಕ ಮಕ್ಕಳು ತಂದೆ-ತಾಯಿ, ಗುರುಗಳು ಹಾಗೂ ಗೆಳೆಯರೊಂದಿಗೆ ಭಾಂಧವ್ಯವನ್ನು ಗಟ್ಟಿಯಾಗಿಸಿಕೊಳ್ಳಲಿ ಎಂದರು.

ನಂತರ ಮಕ್ಕಳಿಗೆ ಕರಿ ಎರೆದು ಹಬ್ಬದ ಊಟ ಉಣಬಡಿಸಿದರು. ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸಂಕ್ರಾಂತಿ ಸಂತೆಯಲ್ಲಿ ಹಬ್ಬಕ್ಕೆ ಬೇಕಾಗುವ ವಿವಿಧ ರೀತಿಯ ವಸ್ತುಗಳು, ಆಹಾರ ಪದಾರ್ಥಗಳನ್ನು ಸ್ವ-ಉದ್ಯೋಗ ಮಾಡುತ್ತಿರುವ ಮಹಿಳೆಯರು ವಿದ್ಯಾರ್ಥಿಗಳ ಸಹಾಯದಿಂದ ಮಾರಾಟ ಮಾಡಿದರು. ಮಕ್ಕಳು ಸಾಂಸ್ಕೃತಿಕ ಉಡುಪುಗಳನ್ನು ತೊಟ್ಟು ಗಾಳಿಪಟಗಳನ್ನು ಹಾರಿಸುವ ಮೂಲಕ ಸಂಭ್ರಮಿಸಿದರು.

ಶಾಲೆ ಪ್ರಾಚಾರ್ಯೆ ಸಾಧನಾ ಎಸ್​., ಐಟಿಐ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಪಾಲಕರು, ಶಿಕ್ಷಕರು, ಸಿಬ್ಬಂದಿ, ಇತರರು ಇದ್ದರು.