ಶಿವಮೊಗ್ಗದ ಸಿಇಎನ್ ಠಾಣೆ. 
ಜಿಲ್ಲೆ

ಮ್ಯಾಟ್ರಿಮೊನಿಯಲ್ಲಿ ಯುವತಿ ಪರಿಚಯ, 99 ಲಕ್ಷ ರೂ. ಪಂಗನಾಮ !

ಶಿವಮೊಗ್ಗ: ಮ್ಯಾಟ್ರಿಮೊನಿ ಆ್ಯಪ್‌ನಲ್ಲಿ ಪರಿಚಿತವಾದ ಯುವತಿಯ ಬಣ್ಣದ ಮಾತುಗಳಿಗೆ ಬೆರಗಾದ ಶಿವಮೊಗ್ಗದ ಯುವಕನೊಬ್ಬ ಬರೋಬ್ಬರಿ 99 ಲಕ್ಷ ರೂ. ಕಳೆದುಕೊಂಡಿದ್ದಾನೆ.

ಕಳೆದ ಏಪ್ರಿಲ್‌ನಲ್ಲಿ ಮದುವೆ ಆಗಲು ಹುಡುಗಿ ಹುಡುಕುತ್ತಿದ್ದ ಶಿವಮೊಗ್ಗದ ಯುವಕ ಮ್ಯಾಟ್ರಿಮೊನಿ ಆ್ಯಪ್‌ವೊಂದರಲ್ಲಿ ಯುವತಿಯ ಪ್ರೊಫೈಲ್ ನೋಡಿ ಅವರೊಂದಿಗೆ ಚಾಟ್ ಆರಂಭಿಸಿದ್ದ. ಪರಸ್ಪರ ಪರಿಚಯ ಮಾಡಿಕೊಂಡು ಮಾತುಕತೆ ಮುಂದುವರಿಸಿದ್ದರು.
ಈ ನಡುವೆ ಯುವತಿ ತನ್ನ ಹೆಸರನ್ನು ಸ್ವಪ್ನ ಎಂದು ಹೇಳಿಕೊಂಡಿದ್ದಳು. ತಾನು ಲಂಡನ್‌ನಲ್ಲಿ ತನ್ನ ಚಿಕ್ಕಪ್ಪನ ಜತೆಯಲಿದ್ದು ಅವರು ವಾಲ್ ಸ್ಟ್ರೀಟ್‌ನಲ್ಲಿ ಮಾರ್ಕೆಟ್ ಅನಾಲಿಸ್ಟ್ ಆಗಿದ್ದಾರೆ. ಅದರಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುತ್ತಿದ್ದೇನೆ. ನೀವೂ ಹೆಚ್ಚು ಹಣ ಗಳಿಸಬೇಕಿದ್ದರೆ ಲಿಂಕ್ ಕಳಿಹಿಸುತ್ತೇನೆ. ಜಾಯಿನ್ ಆಗಿ ಹಣ ಹೂಡಿಕೆ ಮಾಡಬಹುದು ಎಂದು ನಂಬಿಸಿದ್ದಳು.
ಆಕೆಯ ಮಾತು ನಂಬಿದ ಯುವಕ ಲಿಂಕ್ ಅನ್ನು ಕ್ಲಿಕ್ ಮಾಡಿ ಆ್ಯಪ್ ಡೌನ್‌ಲೋಡ್ ಮಾಡಿ ಅದರಲ್ಲಿದ್ದ ಮಾರ್ಗಸೂಚಿಗಳನ್ನು ಪೂರ್ಣಗೊಳಿಸಿದ್ದ. ಆ್ಯಪ್‌ನಲ್ಲಿ ಸೂಚಿಸಿದಂತೆ ವಿವಿಧ ಹಂತಗಳಲ್ಲಿ ಬರೋಬ್ಬರಿ 99.03 ಲಕ್ಷ ರೂ. ಹೂಡಿಕೆ ಮಾಡಿದ್ದ. ಆನಂತರ ಮೋಸ ಹೋಗಿರುವುದು ತಿಳಿಯುತ್ತಿದ್ದಂತೆ ಯುವಕ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಬಗ್ಗೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.