ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ಮಹಾತ್ಮ ಗಾಂಧೀಜಿ, ಅಂಬೇಡ್ಕರ್ ಭಾವಚಿತ್ರಕ್ಕೆ ಮಧು ಬಂಗಾರಪ್ಪ ನಮನ ಸಲ್ಲಿಸಿದರು. ಗುರುದತ್ತ ಹೆಗಡೆ, ಜಿ.ಕೆ.ಮಿಥುನ್‌ಕುಮಾರ್, ಕಾರಿಯಪ್ಪ ಇದ್ದರು. 
ಜಿಲ್ಲೆ

ನೋಟ್‌ಬುಕ್ ಬದಲು ನೋಟ್‌ಶೀಟ್ ಪರಿಚಯ: ಮಧು ಬಂಗಾರಪ್ಪ

ಶಿವಮೊಗ್ಗ: ಸರ್ಕಾರಿ ಶಾಲೆಗಳ ಮಕ್ಕಳಿಗೆ ಪುಸ್ತಕ ಅಥವಾ ಬ್ಯಾಗ್ ಹೊರೆ ಕಡಿಮೆ ಮಾಡಲು ನೋಟ್‌ಬುಕ್ ಬದಲು ನೋಟ್‌ಶೀಟ್ ಪರಿಚಯಿಸಲು ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಬಾಲ್ಯದಲ್ಲಿಯೇ ಮಕ್ಕಳು ಅಧಿಕ ಭಾರ ಹೊರುತ್ತಿದ್ದು, ಇದರಿಂದ ಭವಿಷ್ಯದಲ್ಲಿ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈಗಾಗಲೇ ಪ್ರತಿ ತಿಂಗಳ ಮೂರನೇ ಶನಿವಾರ ಬ್ಯಾಗ್ ರಹಿತ ದಿನ ಘೋಷಿಸಲಾಗಿದೆ. ಇದೀಗ ನೋಟ್‌ಬುಕ್‌ಗಳ ಬದಲು ನೋಟ್‌ಶೀಟ್‌ಗಳನ್ನು ನೀಡುವ ಮೂಲಕ ಭಾರ ಕಡಿಮೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಾಜ್ಯಾದ್ಯಂತ ನಮ್ಮ ಶಾಲೆ ನಮ್ಮ ಜವಾಬ್ದಾರಿ ಯೋಜನೆ ಜಾರಿಗೆ ತಂದಿದ್ದು, ಸರ್ಕಾರದಿಂದ ಹೊರತುಪಡಿಸಿ ಸಂಘ ಸಂಸ್ಥೆಗಳು, ಹಳೇ ವಿದ್ಯಾರ್ಥಿಗಳು, ಉದ್ಯಮಿಗಳಿಂದ ಶಾಲೆಗಳಿಗೆ ಆರ್ಥಿಕ ನೆರವು ಕೊಡಿಸುವ ಕೆಲಸ ಆಗುತ್ತಿದೆ. ಇದರಿಂದ ರಾಜ್ಯದಲ್ಲಿ ಐದು ವರ್ಷದಲ್ಲಿ 500ರಿಂದ ಒಂದು ಸಾವಿರ ಕೋಟಿ ರೂ. ಅನುದಾನ ನಿರೀಕ್ಷೆ ಮಾಡಿದ್ದೇವೆ. ಸರ್ಕಾರಕ್ಕೆ ಅನುದಾನ ಕೊಡುವ ಬದಲು ದಾನಿಗಳೇ ನೇರವಾಗಿ ಸರ್ಕಾರಿ ಶಾಲೆಗಳಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಇದು ರಾಜ್ಯದಲ್ಲಿ ಯಶಸ್ವಿಯಾಗುತ್ತಿದೆ ಎಂದರು.
ಮುಂದಿನ ಶೈಕ್ಷಣಿಕ ಸಾಲಿನಿಂದ ರಾಜ್ಯದ ಸುಮಾರು 25 ಸಾವಿರ ಮಕ್ಕಳಿಗೆ ನೀಟ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿಯಾಗುವಂತೆ ಸರ್ಕಾರದಿಂದಲೇ ತರಬೇತಿ ನೀಡಲು ಉದ್ದೇಶಿಸಲಾಗಿದೆ. ರಾಜ್ಯಾದ್ಯಂತ 1,800 ಎಲ್ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಿ 36 ಸಾವಿರ ಮಕ್ಕಳನ್ನು ದಾಖಲಿಸಿಕೊಳ್ಳಲಾಗಿದೆ. 1,700 ಕನ್ನಡ ಮತ್ತು ಆಂಗ್ಲ ಮಧ್ಯಮದ ಶಾಲೆಗಳನ್ನು ತೆರೆಯಲಾಗಿದೆ ಎಂದರು.
ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಎಲ್ಲ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಕೆಪಿಎಸ್ ಶಾಲೆಗಳನ್ನು ತೆರೆಯಲಾಗುತ್ತಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣರಾದ ಮಕ್ಕಳಿಗೆ ಮೂರು ಪೂರಕ ಪರೀಕ್ಷೆಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.