ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಅವರು ಆಸ್ಟ್ರೇಲಿಯಾಕ್ಕೆ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಈಚೆಗೆ ಕಿಕ್ಕೇರಿ ಅಭಿಮಾನಿ ಬಳಗದಿಂದ ಗೌರವಿಸಿ ಬೀಳ್ಕೋಡುಗೆ ನೀಡಲಾಯಿತು. ಎಚ್.ಟ. ಮಂಜು, ಸುರೇಶ್, ಚಂದ್ರಮೋಹನ್ ಇದ್ದರು. 
ಜಿಲ್ಲೆ

ವಿದೇಶದಲ್ಲಿ ಕವಿ ಕೆಎಸ್‌ನ ಪರಿಚಯಿಸುವೆ

ಲೋಕೇಶ್ ಮನು. ಡಿ

ಕಿಕ್ಕೇರಿ: ನಮ್ಮೂರಿನ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರು ಕಾವ್ಯದ ಮಲ್ಲಿಗೆಯ ಪರಿಮಳವನ್ನು ವಿದೇಶಗಳಲ್ಲಿ ಪಸರಿಸುವ, ಪರಿಚಯಿಸುವ ಕೆಲಸ ಮಾಡಲು ಬಲು ಖುಷಿ ಇದೆ ಎಂದು ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.

ಇಲ್ಲಿನ ಕೆ.ಎಸ್. ನರಸಿಂಹಸ್ವಾಮಿ ಬಳಗದವರಿಂದ ಈಚೆಗೆ ನೀಡಿದ ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡಿ, ಆಸ್ತ್ರೇಲಿಯಾದ ಪರ್ತ್‌ನ ಕೆನಡಿ ಬ್ಯಾಪ್ಟಿಸ್ಟ್ ಆಡಿಟೋರಿಯಂನಲ್ಲಿ ನ.8ರಂದು ಕನ್ನಡ ರಾಜ್ಯೋತ್ಸವ ನಡೆಯಲಿದೆ. ಹಾಗೂ ನ. 9ರಂದು ಸೆಂಚುರಿ ಪಾರ್ಕ್ ಕಮ್ಯುನಿಟಿ ಸೆಂಟರ್‌ನಲ್ಲಿ ವಿಶೇಷ ಉಪನ್ಯಾಸ, ಸಂವಾದ, ಗಾಯನ, ಕವಿಗೋಷ್ಠಿಯಂತಹ ಕಾರ್ಯಕ್ರಮ ಇದೆ. ಇಲ್ಲಿನ ಕಾರ್ಯಕ್ರಮಕ್ಕೆೆ ಸುಗಮ ಸಂಗೀತಾ ಗಾಯಕನಾಗಿ ತಾನು ಹಾಗೂ ಕಿಕ್ಕೇರಿ ಲಿಖಿತ್ ಕೃಷ್ಣ ತೆರಳುತ್ತಿದ್ದೇವೆ. ಆಸ್ಟ್ರೇಲಿಯಾದಲ್ಲಿ ಭಾಗವಹಿಸಿ ಮತ್ತಷ್ಟು ಕವಿಯ ಪರಿಚಯ ಮಾಡಲಾಗುವುದು. ಇಲ್ಲಿಗೆ ಸುಗಮ ಸಂಗೀತಾ ಗಾಯಕನಾಗಿ ಲಿಖಿತ್ ಕೃಷ್ಣ ಅವರ ಜತೆ ತೆರಳುತ್ತಿರುವೆ. ಆಸ್ಟ್ರೇಲಿಯಾದಲ್ಲಿ ಸಾಕಷ್ಟು ಕನ್ನಡಿಗರು ನೆಲೆಸಿದ್ದು, ವರ್ಷಕ್ಕೊಮ್ಮೆ ಕನ್ನಡದ ಹಬ್ಬವನ್ನು ಸಂಭ್ರಮದಿಂದ ಆಚರಿಸಲಿದ್ದಾರೆ ಎಂದು ಹೇಳಿದರು.

ವಿದೇಶಕ್ಕೆ ತೆರಳುತ್ತಿರುವ ತನಗೆ ತವರೂರಿನಿಂದ ನೀಡುತ್ತಿರುವ ಗೌರವ, ಬೀಳ್ಕೋಡುಗೆಗೆ ಅಭಾರಿಯಾಗಿರುವೆ. ಈ ಕಾರ್ಯಕ್ರಮದಲ್ಲಿ ಕನ್ನಡದ ಕಂಪಿನ ಜತೆ ಕಿಕ್ಕೇರಿಯ ಮೈಸೂರಿನ ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಕಾವ್ಯಗಳನ್ನು ಹಾಡಲಾಗುವುದು. ಕೆಎಸ್‌ನ ಕುರಿತು ಉಪನ್ಯಾಸ, ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕೆಎಸ್‌ನ ಕಾವ್ಯ, ಗೀತೆಗಳಿಗೆ ಮನಸೋಲದವರು ಇಲ್ಲ. ಇಲ್ಲಿನ ಕನ್ನಡ ಶಾಲೆಯ ಮಕ್ಕಳಿಗೆ ಹಾಗೂ ಸಂಗೀತಪ್ರಿಯರಿಗೆೆ ಕನ್ನಡ ಗೀತೆಗಳ ತರಬೇತಿ ನೀಡಲಾಗುವುದು. ಕನ್ನಡ ಶಾಲೆಯ ಮಕ್ಕಳಿಗೆ ಕನ್ನಡ ಪುಸ್ತಕಗಳನ್ನು ವಿತರಿಸಿ ಕನ್ನಡ ಭಾಷೆ, ಪುಸ್ತಕ ಓದುವ ಅಭಿರುಚಿ ಮೂಡಿಸಲಾಗುವುದು. ಇಂತಹ ಕವಿಯ ಕವಿತೆ ಹಾಡುವ, ಗುಣಗಾನ ಮಾಡುವ ಸೌಭಾಗ್ಯ ತನಗೆ ಸಿಕ್ಕಿರುವುದು ಹೆಮ್ಮೆ ಎಂದರು.

ಶಾಸಕ ಎಚ್.ಟಿ.ಮಂಜು, ತಾಪಂ ಮಾಜಿ ಅಧ್ಯಕ್ಷ ಸುರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ. ನಂದೀಶ್, ನಿವೃತ್ತ ಪ್ರಾಂಶುಪಾಲ ಚಂದ್ರಮೋಹನ್ ಇದ್ದರು.