ಬದಿಯಡ್ಕ: ಕಾಸರಗೋಡಿನಲ್ಲಿ ಕನ್ನಡ ಏನು ಎಂಬುದನ್ನು ಜಗತ್ತಿಗೆ ಪಸರಿಸುವ ಕಾರ್ಯದಲ್ಲಿ ಟ್ರಸ್ಟನ ಕಾರ್ಯ ಶ್ಲಾಘನೀಯ. ಬಲು ಅಪರೂಪದ ಕಾರ್ಯದ ಮೂಲಕ ಕಾಸರಗೋಡು ವಿಚಾರಗಳ ವಿಕಾಸವಾಗುತ್ತಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಹೇಳಿದರು.
ಶನಿವಾರ ಸಂಜೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ಜರುಗಿದ ವಿಕಾಸ ಟ್ರಸ್ಟ್ ನ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನದ 2ನೇ ಹಂತದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮಾಹಿತಿ ಅಭಿಯಾನದ 76ನೇ ಸಂಚಿಕೆ ಅವರು ಬಿಡುಗಡೆಗೊಳಿಸಿದರು. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ದ್ಯಾವಯ್ಯ ಐಪಿಎಸ್ ಮಾತನಾಡಿ, ಕಾಸರಗೋಡಿನ ಕನ್ನಡಿಗರು ಶಾಂತಿಪ್ರಿಯರು. ಹಿಂದಿನ ಕಾಸರಗೋಡಿಗೂ ಇಂದಿನ ಕಾಸರಗೋಡಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವ ಇಲ್ಲಿನ ಕನ್ನಡಿಗರ ಸಂಸ್ಕೃತಿ, ವಿಚಾರಗಳನ್ನು ಜಗತ್ತಿಗೆ ತಲುಪಿಸುವಲ್ಲಿ ವಿಕಾಸ ಟ್ರಸ್ಟ್ ಉತ್ತಮ ಕಾರ್ಯ ಮಾಡುತ್ತಿದೆ. ಯುವಸಮುದಾಯ ಡ್ರಗ್ಸ್ ಮೊದಲಾದ ಮಾದಕ ದ್ರವ್ಯಗಳ ಚಟಕ್ಕೆ ಬಲಿಯಾಗುತ್ತಿದ್ದು, ಅದನ್ನು ಹಿಮ್ಮೆಟ್ಟಿಸಿ ಧೈರ್ಯ ತುಂಬಿ ಅವರಿಗೆ ಮರುಜೀವನ ನೀಡುವಲ್ಲಿ ಎಲ್ಲರೂ ಕೈಜೋಡಿಸಬೇಕು. ಇದಕ್ಕಾಗಿ ನಮ್ಮೊಂದಿಗೆ ಸಂಘ-ಸಂಸ್ಥೆಗಳು ಸಹಕರಿಸಬೇಕು ಎಂದು ಕರೆಯಿತ್ತರು.
ನೀರ್ಚಾಲು ಮಹಾಜನ ವಿದ್ಯಾಸಂಸ್ಥೆ ವ್ಯವಸ್ಥಾಪಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಬೇಳ ಶೋಕಮಾತಾ ದೇವಾಲಯದ ಸ್ಟೇನಿ ಪಿರೇರಾ ಶುಭಾಶಂಸನೆಗೈದರು. ಪದ್ಮಶ್ರೀ ಪುರಸ್ಕೃತ ಸತ್ಯನಾರಾಯಣ ಬೆಳೇರಿ ಅವರನ್ನು ಸನ್ಮಾನಿಸಲಾಯಿತು. ವಿಕಾಸ ಟ್ರಸ್ಟ್ ಅಧ್ಯಕ್ಷ ರವಿನಾರಾಯಣ ಗುಣಾಜೆ ಮೊದಲ ಹಂತದ ಅಭಿಯಾನದ ಮಾಹಿತಿ ವಿವರಿಸಿ, ಪ್ರಾಸ್ತಾವಿಸಿದರು. ಕಾರ್ಯಕ್ರಮ ನಿರೂಪಿಸಿದ ದಿವ್ಯಾಗಟ್ಟಿ ಪರಕ್ಕಿಲ ವಂದಿಸಿದರು. ವಿಕಾಸ ಟ್ರಸ್ಟನ ಮೊದಲ ಹಂತದ ಅಭಿಯಾನದ 75 ಚಿತ್ರಗಳನ್ನು ವಿವರ ಸಹಿತ ವೇದಿಕೆಯಲ್ಲಿ ಪ್ರದರ್ಶಿಸಲಾಯಿತು.