ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹೋಬಳಿಯ ಕಲ್ಲುಸಾದರಹಳ್ಳಿಯ ರಾಷ್ಟ್ರೀಯ ಹೆದ್ದಾರಿ 234ಕ್ಕೆ ಹೊಂದಿಕೊಂಡಿರುವ ರಸ್ತೆ ಬದಿಯಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ತೆಂಗಿನ ನಾರಿನ ಘಟಕ ಸ್ಥಾಪನೆ ಮಾಡಲಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
ಶಬ್ದ, ಧೂಳು, ಇತರ ತ್ಯಾಜ್ಯ ವಿಲೇವಾರಿ ಕಲುಷಿತ ನೀರು ಶಾಲಾ ನೈರ್ಮಲ್ಯಕ್ಕೆ ತೊಂದರೆಯಾಗಿದೆ. ಗ್ರಾಮಸ್ಥರು ಶಾಲಾ ಉಸ್ತುವಾರಿ ಮಂಡಳಿಗೆ ದೂರು ನೀಡಿದ್ದಾರೆ. ಘಟಕದ ಲೈಸೆನ್ಸ್ 2023ಕ್ಕೆ ಮುಗಿದಿದೆ. ಆದರೂ ಗ್ರಾಮ ಪಂಚಾಯಿತಿ, ಅರಸೀಕೆರೆ ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ತಾಲೂಕು ಆಡಳಿತ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ಬಗ್ಗೆ ಎಲ್ಲ ಗೊತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿದೆ. ಮಕ್ಕಳ ವ್ಯಾಸಂಗಕ್ಕೆ ತೊಂದರೆಯಾಗುತ್ತಿರುವ ಘಟಕ ಸ್ಥಳಾಂತರ ಮಾಡದಿದ್ದರೆ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.