ಹುಣಸೂರು: ಗಿಡಮೂಲಿಕೆಗಳ ಕುರಿತು ಅಪಾರ ಅನುಭವ ಹೊಂದಿರುವ ಆದಿವಾಸಿಗಳು ತಮ್ಮ ಮುಂದಿನ ಪೀಳಿಗೆಗೂ ಗಿಡಮೂಲಿಕೆ ಜ್ಞಾನವನ್ನು ಧಾರೆ ಎರೆಯಬೇಕು ಎಂದು ಮೈಸೂರು ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಸ್.ರಾಧಾಕೃಷ್ಣ ರಾಮರಾವ್ ಸಲಹೆ ನೀಡಿದರು.
ನಗರದ ಡೀಡ್ ಸಂಸ್ಥೆಯಲ್ಲಿ ಮೈಸೂರಿನ ಸರ್ಕಾರಿ ಆಯುರ್ವೇದ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುಸ್ಥಿರ ಆರೋಗ್ಯವನ್ನು ಆಯುರ್ವೇದ ಪದ್ಧತಿ ಅನುಸರಿಸುವ ಮೂಲಕ ಪಡೆಯಬಹುದಾಗಿದೆ. ಅವಸರದ ಮತ್ತು ಪೈಪೋಟಿಯ ಈ ಯುಗದಲ್ಲಿ ಮನುಷ್ಯನ ಮನಸಿಗೆ ನೆಮ್ಮದಿ ಸಿಗುವಂತಾಗಲು ಆಯುರ್ವೇದ ಪದ್ಧತಿಯ ಅನುಸರಣೆ ಅಗತ್ಯ. ಹಣ ಮತ್ತು ಐಹಿಕ ಭೋಗಗಳನ್ನು ಅನುಭವಿಸುವ ಹಪಾಹಪಿತನವನ್ನು ತ್ಯಜಿಸಬೇಕಿದೆ. ಈ ನೆಲದ ಮೂಲನಿವಾಸಿಗಳಾದ ಆದಿವಾಸಿಗಳು ಮತ್ತು ಆಯುರ್ವೇದ ಪದ್ಧತಿಗೆ ಅವಿನಾಭಾವ ಸಂಬಂಧವಿದೆ. ಆದಿವಾಸಿಗಳು ಗಿಡಮೂಲಿಕೆ ಬಳಕೆಯ ತಜ್ಞರಾಗಿದ್ದು, ಮುಂದಿನ ತಲೆಮಾರಿಗೂ ತಮ್ಮಲ್ಲಿರುವ ಜ್ಞಾನವನ್ನು ಪಸರಿಸುವ, ಅರಿವು ಮೂಡಿಸುವ ಕಾರ್ಯವನ್ನು ಆ ಸಮುದಾಯದ ಹಿರಿಯರು ಮಾಡಬೇಕಾದ ಅಗತ್ಯತೆ ಹೆಚ್ಚಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಡಾ.ಎಚ್.ಆರ್.ಸಿದ್ದೇಗೌಡ ಮಾತನಾಡಿ, ಯೋಗ, ಧ್ಯಾನ ಗುಣಮಟ್ಟದ ಆಹಾರ ಪದ್ಧತಿ ಪರಂಪರೆಯಿಂದ, ಋಷಿಮುನಿಗಳಿಂದ ನಮಗೆ ಬಂದಿರುವ ಜ್ಞಾನವಾಗಿದ್ದು, ಆಯುರ್ವೇದ ಕಾಲೇಜು ಈ ಜ್ಞಾನವನ್ನು ಶಾಸ್ತ್ರೀಯವಾಗಿ ಯುವ ಜನರಿಗೆ ಕಲಿಸುತ್ತಿದ್ದಾರೆ. ಪರಂಪರೆಯನ್ನು ಉಳಿಸುತ್ತಿದ್ದಾರೆ ಎಂದರು.
ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಮಾತನಾಡಿ, ಈ ಸಾಲಿನ ಘೋಷವಾಕ್ಯ ಜನರಿಗಾಗಿ-ಜಗತ್ತಿಗಾಗಿ ಆಯುರ್ವೇದ ಎನ್ನುವುದಾಗಿದ್ದು, ನಮ್ಮ ಮೂಲ ಪರಂಪರೆಯನ್ನು ಉಳಿಸುವತ್ತ ಎಲ್ಲರೂ ಗಮನಹರಿಸಬೇಕಿದೆ. ಆಧುನಿಕ ಆರೋಗ್ಯ ಪದ್ಧತಿಯನ್ನು ನಿರಾಕರಿಸಿರೆಂದು ಹೇಳುವುದಿಲ್ಲ. ಬದಲಾಗಿ ನಮ್ಮದೇ ಆರೋಗ್ಯ ಪದ್ಧತಿಯ ಪರಿಣಾಮಕಾರಿ ಪ್ರಯೋಜನಗಳನ್ನು ಪಡೆದುಕೊಳ್ಳುವಲ್ಲಿ ಮತ್ತು ಅದನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿರುವುದು ಬೇಸರದ ಸಂಗತಿ ಎಂದರು.
ದಿನಾಚರಣೆ ಅಂಗವಾಗಿ ಆರೋಗ್ಯ ಉಚಿತ ತಪಾಸಣೆ, ಔಷಧ ವಿತರಣೆ, ಸುಸ್ಥಿರ ಆಹಾರ ಪದ್ಧತಿ, ಯೋಗ, ಧ್ಯಾನದ ಮಹತ್ವ ಕುರಿತು ಕಾಲೇಜಿನ ವೈದ್ಯರ ಮಾಹಿತಿ ನೀಡಿದರು. 80ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು. ಕಾಲೇಜಿನ ಡಾ. ಸಂಜಯ ಕುಮಾರ್, ಡಾ.ಅನಂತ್.ಎಸ್.ದೇಸಾಯಿ, ಡಾ.ಸಿದ್ದರಾಮ ಗುಳೆದ್, ಡಾ.ರಾಜಶ್ರೀ ಹಾಗೂ ಡಾ. ಸುಧೀಂದ್ರ ನವಲೆ ಮತ್ತು 10ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳ ತಂಡ ಶಿಬಿರದ ನೇತೃತ್ವ ವಹಿಸಿದ್ದರು.
ವೆರಿಕೋಸ್, ನರದೌರ್ಬಲ್ಯ, ಕಿವಿ ಸಮಸ್ಯೆ, ಸಾಮಾನ್ಯ ಆರೋಗ್ಯ ಸಮಸ್ಯೆಗಳು, ಮಹಿಳೆಯರ ಅರೋಗ್ಯ ಸಮಸ್ಯೆಗಳು, ಚರ್ಮರೋಗ ಮುಂತಾದವನ್ನು ಪರಿಶೀಲಿಸಿ ಔಷಧ ನೀಡಲಾಯಿತು.
ಮುಂಖಡರಾದ ಬಾಲಕೃಷ್ಣೆಗೌಡ, ನಾಗಣ್ಣಗೌಡ, ನಾಗಣ್ಣ ದೇವಾಡಿಗ, ವಿಠಲ್ ನಾಣಾಚ್ಚಿ, ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ಲಕ್ಷ್ಮೀ, ಡೀಡ್ ಸಂಸ್ಥೆಯ ಎ.ಪ್ರಕಾಶ್, ಗಿರಿಜನ ಕಲ್ಯಾಣಾಧಿಕಾರಿ ಗಂಗಾಧರ್, ಗಿಡಮೂಲಿಕೆ ತಜ್ಞೆ ಮಾಸ್ತಮ್ಮ ಸೇರಿದಂತೆ ಆದಿವಾಸಿಗಳು ಮತ್ತು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.