ಜಿಲ್ಲೆ

ಒಳ ಮೀಸಲಾತಿ ಜಾರಿ ಕಡೆಗಣನೆ ಸಲ್ಲ

ಎನ್.ವೆಂಕಟೇಶ್

ದಲಿತ ಸಂಘಟನೆಗಳ ಎಚ್ಚರಿಕೆ ಶಾಸಕರ ಗೃಹಕಚೇರಿ ಮುಂದೆ ತಮಟೆ ಚಳವಳಿ

ಗೌರಿಬಿದನೂರು: ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡಬೇಕು ಎಂದು ಅಗ್ರಹಿಸಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಅವರ ಗೃಹ ಕಚೇರಿ ಮುಂದೆ ದಲಿತ ಸಂಘಟನೆಗಳ ಮುಖಂಡರು ಶನಿವಾರ ತಮಟೆ ಚಳವಳಿ ಹಮ್ಮಿಕೊಂಡಿದ್ದರು.

ಹಿರಿಯ ದಲಿತ ಮುಖಂಡ ಸಿ.ಜಿ.ಗಂಗಪ್ಪ ಮಾತನಾಡಿ, ಅಂಧ್ರದಲ್ಲಿ ಒಳ ಮೀಸಲಾತಿ ಅನುಷ್ಠಾನಗೊಂಡು ಮೂರು ದಶಕಗಳು ಕಳೆದಿವೆ. ಇದರ ಪ್ರತಿಭಟನೆ ದೇಶವ್ಯಾಪಿ ತೀವ್ರಗೊಂಡು ಕೊನೆಗೆ ನ್ಯಾಯಾಲಯ ಮಧ್ಯಪ್ರವೇಶ ಮಾಡಿ ಅರ್ಥಿಕ, ಸಾಮಾಜಿಕ, ಹಿಂದುಳಿದ, ಪರಿಶಿಷ್ಟ ಜಾತಿ, ಒಳ ಪಂಗಡಗಳಿಗೆ ಈ ಕೂಡಲೇ ಒಳ ಮೀಸಲಾತಿ ನೀಡುವಂತೆ ಅದೇಶ ನೀಡಿದೆ. ಆದೇಶ ನೀಡಿ ನಾಲ್ಕು ತಿಂಗಳು ಕಳೆದರೂ ಕೆಲ ರಾಜ್ಯಗಳು ಒಳ ಮೀಸಲಾತಿ ಜಾರಿ ಮಾಡಲು ಹಿಂದೇಟು ಹಾಕುತ್ತಿವೆ. ರಾಜ್ಯದಲ್ಲಿಯೂ ಕಾಂಗ್ರೆಸ್ ಸರ್ಕಾರ ವಿನಾಃಕಾರಣ ಕಾಲಹರಣ ಮಾಡಿ, ಒಳಮೀಸಲಾತಿ ನೀಡಲು ಮೀನಾಮೇಷ ಎಣಿಸುತ್ತಿದೆ. ಮುಂದುವರಿದರೆ ಹೋರಾಟ ಉಗ್ರರೂಪ ತಾಳುತ್ತದೆ ಎಂದು ಗಂಗಪ್ಪ ಎಚ್ಚರಿಸಿದರು.

ಮುಖಂಡ ಚೆನ್ನಪ್ಪ ಮಾತನಾಡಿ, ಒಳ ಮೀಸಲಾತಿಯನ್ನು ಪರಿಶಿಷ್ಟ ಜಾತಿಗೆ ನೀಡಿ ಎಂದು ಸುಪ್ರೀಂ ಕೋರ್ಟ್ ಅದೇಶ ನೀಡಿದೆ. ನಮ್ಮ ರಾಜ್ಯ ಪ್ರತ್ಯೇಕ ಸಮಿತಿ ಮಾಡಿ ಮೀಸಲಾತಿ ನೀಡುವುದಾಗಿ ಹೇಳಿ ನಾಲ್ಕು ತಿಂಗಳ ಗಡುವು ತೆಗೆದುಕೊಂಡಿತ್ತು. ಗಡವು ಮುಗಿದು ಎರಡು

ತಿಂಗಳು ಕಳೆದರೂ ಮೀಸಲಾತಿ ಜಾರಿಗೊಳಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರ ಪರವಾಗಿ ಕಾರ್ಯದರ್ಶಿ ಶ್ರೀನಿವಾಸಗೌಡ ಅವರು ಮನವಿ ಸ್ವೀಕರಿಸಿ ಮಾತನಾಡಿ, ಸಮುದಾಯದ ರುದ್ರಭೂಮಿ ಅಭಿವೃದ್ಧಿಗೆ 2.10 ಕೋಟಿ ರೂ. ಅನುದಾನವನ್ನು ಶಾಸಕರು ಮಂಜೂರು ಮಾಡಿಸಿದ್ದು, ಮೀಸಲಾತಿ ಹೋರಾಟದ ಬಗ್ಗೆ ಶಾಸಕರ ಗಮನಕ್ಕೆ ತರಲಾಗುವುದು ಎಂದರು.

ಮುಖಂಡರಾದ ಹುದುಗೂರು ಕೆ.ನಂಜುಂಡಪ್ಪ, ವಕೀಲ ನರಸಿಂಹಮೂರ್ತಿ, ಗೆದರೆ ವೆಂಕಟೇಶ್, ಜೆ.ಕೆ.ಗಂಗಾಧರ್, ಜಿ.ಗಂಗಾಧರ್, ಸೋಮಯ್ಯ, ಮಲ್ಲಸಂದ್ರ ಗಂಗಾಧರ್, ಮುನಿಯಪ್ಪ, ಅದೀಶ, ಸುದರ್ಶನ್ ಇದ್ದರು.

ಇದನ್ನೂ ಓದಿ: ಮುಗಿಯದ ಪಡಿತರ ಚೀಟಿ ಗೊಂದಲ  ಅಧಿವೇಶನದಲ್ಲಿ ಧ್ವನಿಯೆತ್ತಿ

ವಕೀಲ ನರಸಿಂಹಮೂರ್ತಿ ಮಾತನಾಡಿ, ಮಾದಿಗ ಸಮುದಾಯದ ರಾಜ್ಯ ಸಮಿತಿ ಸೂಚನೆ ಮೇರೆಗೆ ರಾಜ್ಯದ ಎಲ್ಲ ಶಾಸಕರ ಮನೆ ಮುಂದೆ ತಮಟೆ ಚಳವಳಿ ಹಮ್ಮಿಕೊಳ್ಳಲಾಗುತ್ತಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕ್ಷೇತ್ರದ ಶಾಸಕ ಪುಟ್ಟಸ್ವಾಮಿಗೌಡ ಅವರು ಒಳಮೀಸಲಾತಿ ಜಾರಿ ಬಗ್ಗೆ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.