ಜಿಲ್ಲೆ

ಗಂಡ-ಹೆಂಡತಿ ಸಂಘರ್ಷ ಇತಿಶ್ರೀಗೆ ಆಪ್ತ ಸಮಾಲೋಚನೆ ನೆರವು

ಶಿರಸಿ: ಗಂಡ-ಹೆಂಡತಿಯರ ನಡುವಿನ ಸಂಘರ್ಷವನ್ನು ಆಪ್ತ ಸಮಾಲೋಚನೆ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ. ನಮ್ಮ ಸ್ವಾರ್ಥ, ಕೋಪ, ದುರಾಸೆ, ಅತೃಪ್ತಿ ನಿರಾಸೆಗಳು ಸಂಬಂಧವನ್ನು ಬಿಗಡಾಯಿಸದಂತೆ, ಮಾನವೀಯ ನೆಲೆಯಲ್ಲಿ ವರ್ತಿಸುವಂತೆ ಮಾಡಲು ಮಾರ್ಗದರ್ಶನ ಬೇಕು. ಸಾಂತ್ವನ ಕೇಂದ್ರಗಳು ಆಪ್ತಸಮಾಲೋಚನೆಗಳ ಮೂಲಕ ಸಮಾಜದಲ್ಲಿ ಉತ್ತಮ ಸಂಬಂಧಗಳು ಮೂಡಲು ಕಾರಣವಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಡಾ. ಲಕ್ಷ್ಮಿದೇವಿ ಹೇಳಿದರು.


ನಗರದ ಮಹಿಳಾ ಸಾಂತ್ವನ ಸಹಾಯವಾಣಿ ಕಚೇರಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪಾರ್ವತಿ ವೈದ್ಯ ದತ್ತಿನಿಧಿ ಪುರಸ್ಕಾರವನ್ನು ಮಳಲಗಾಂವನ ಅಂಗವಿಕಲರಾದ ತಾರಾ ಮಡಿವಾಳ ಅವರಿಗೆ ನೀಡಿ ಮಾತನಾಡಿದರು.


ಸಾಂತ್ವನ ಮಹಿಳಾ ವೇದಿಕೆಯ ಗೌರವಾಧ್ಯಕ್ಷೆ ಬಿ.ಕೆ. ವೀಣಾಜಿ, ಅಧ್ಯಕ್ಷೆ ಜ್ಯೋತಿ ಭಟ್, ಪಾರ್ವತಿ ವೈದ್ಯ ದತ್ತಿನಿಧಿಯ ಸ್ಥಾಪಕಿ ಡಾ. ವಿಜಯನಳಿನಿ ರಮೇಶ, ಕಾನೂನು ಸಲಹಾಗಾರರಾದ ಫ್ಲಾವಿಯಾ ಜಗದೀಶ್, ಸಿಡಿಪಿಒ ವೀಣಾ ಶಿರ್ಸೀಕರ್, ಶೈಲಜಾ ಗೋರ್ನಮನೆ ಉಪಸ್ಥಿತರಿದ್ದರು.