ಹುಬ್ಬಳ್ಳಿ: ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ಅಂತಾರಾಜ್ಯ ದರೋಡೆಕೋರರ ಕಾಲಿಗೆ ಭಾನುವಾರ ಇಲ್ಲಿಯ ಹಳೇ ಗಬ್ಬೂರ ಬಳಿ ಪೊಲೀಸರು ಗುಂಡು ಹಾರಿಸಿದ್ದಾರೆ.
ದರೋಡೆಕೋರರಾದ ದಕ್ಷಿಣ ಕನ್ನಡ ಜಿಲ್ಲೆ ಉಲ್ಲಾಳ ಮಾಸ್ತಿಕಟ್ಟೆಯ ಫಾರೂಕ್ ಸಿ.ಕೆ. ಭಾವ, ಬೆಳ್ತಂಗಡಿ ಬೆಳಾಲು ಗ್ರಾಮದ ಭರತಕುಮಾರ ಶೆಟ್ಟಿ ನಿಂತಿಕಲ್ಲು ಅವರಿಗೆ ಸಿಸಿಬಿ ಪಿಐ ಮಾರುತಿ ಗುಳ್ಳಾರಿ ಹಾಗೂ ಧಾರವಾಡ ಶಹರ ಠಾಣೆಯ ಪಿಎಸ್‌ಐ ಸ್ವಾತಿ ಮುರಾರಿ ಗುಂಡು ಹಾರಿಸಿದ್ದರು.
ಘಟನೆಯಲ್ಲಿ ಗಾಯಗೊಂಡ ಧಾರವಾಡ ಶಹರ ಠಾಣೆಯ ಪಿಎಸ್‌ಐ ಸ್ವಾತಿ ಮುರಾರಿ, ಸಿಸಿಬಿಯ ಮಹಾಂತೇಶ ಮಾದರ, ಶ್ರೀಕಾಂತ ತಲ್ಲೂರ ಹಾಗೂ ಆರೋಪಿಗಳಿಗೆ ಕೆಎಂಸಿಆರ್‌ಐನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನ. 8ರಂದು ಬೆಳಗ್ಗೆ 3.30ರ ಸುಮಾರಿಗೆ ರಾಹುಲ್ ಎಂಬುವವರು ಕಾರಿನಲ್ಲಿ ಬರುತ್ತಿರುವಾಗ ಸುಮಾರು ಹತ್ತರಿಂದ ಹನ್ನೆರಡು ಜನರು ಎರಡು ವಾಹನದಲ್ಲಿ ಬಂದು ಅಡ್ಡಗಟ್ಟಿ 6.50 ರೂ. ನಗದು, ಮೊಬೈಲ್ ಫೋನ್ ಹಾಗೂ ಇತರ ಪರಿಕರಗಳನ್ನು ದರೋಡೆ ಮಾಡಿದ್ದರು. ಈ ಕುರಿತು ಹುಬ್ಬಳ್ಳಿ ನಗರ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆಗಾಗಿ ಸಿಸಿಬಿ ಪೊಲೀಸರ ನೇತೃತ್ವದಲ್ಲಿ ತಂಡ ನಿಯೋಜಿಸಲಾಗಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಫಾರೂಕ್ ಸಿ.ಕೆ. ಭಾವ, ಭರತ್‌ಕುಮಾರ ಶೆಟ್ಟಿ ಅವರನ್ನು ಬಂಧಿಸಿ ಸ್ಥಳ ಮಹಜರಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸೂಕ್ತ ಎಚ್ಚರಿಕೆ ನೀಡಿ ಶರಣಾಗತಿಗೆ ಪೊಲೀಸರು ಸೂಚಿಸಿದರು. ಮತ್ತೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆಯಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸುದ್ದಿಗಾರರಿಗೆ ತಿಳಿಸಿದರು.
ಫಾರೂಕ್ ಮೇಲೆ ಕೊಲೆ, ದರೋಡೆ, ಸುಲಿಗೆ ಸೇರಿದಂತೆ ಒಟ್ಟು 16 ಪ್ರಕರಣ ಹಾಗೂ ಭರತ ಕುಮಾರ ಶೆಟ್ಟಿ ಮೇಲೆ ದರೋಡೆ, ಕೊಲೆ ಯತ್ನ ಸೇರಿ ನಾಲ್ಕು ಪ್ರಕರಣ ದಾಖಲಾಗಿವೆ. ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ಠಾಣೆಗಳಲ್ಲಿಯೂ ಇಬ್ಬರ ಮೇಲೆ ಪ್ರಕರಣ ದಾಖಲಾಗಿವೆ ಎಂದು ವಿವರಿಸಿದರು.