ಜಿಲ್ಲೆ

ಅಂತಾರಾಜ್ಯ ಬ್ಯಾನ್ ಬಸ್‌ಗೆ ಮಾತ್ರ!

ಮಂಗಳೂರು: ಜನರು ಅಂತಾರಾಜ್ಯ ಪ್ರಯಾಣಿಸಬಹುದು. ಆದರೆ ಬಸ್‌ಗಳು ಸಂಚಾರ ನಡೆಸುವಂತಿಲ್ಲ.

ಇದು ಕೇರಳ- ಕರ್ನಾಟಕ ಗಡಿ ಪ್ರದೇಶದಲ್ಲಿ ಜಾರಿಯಲ್ಲಿರುವ ವಿಚಿತ್ರ ನೀತಿ. ಅನ್‌ಲಾಕ್- 3ರಲ್ಲಿಯೇ ದೇಶದಲ್ಲಿ ಜನರು ಹಾಗೂ ಸರಕು ಅಂತಾರಾಜ್ಯ ಸಂಚಾರಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಆದರೆ ಜನರನ್ನು ಬಹಳಷ್ಟು ಸತಾಯಿಸಿದ ಬಳಿಕ ಜನರು ಅಂತಾರಾಜ್ಯ ಪ್ರಯಾಣಿಸಲು ಕೇರಳ ಸರ್ಕಾರ ಅನುಮತಿಯೇನೋ ನೀಡಿತು. ಆದರೆ ತಮ್ಮ ರಾಜ್ಯದ ಬಸ್‌ಗಳು ಹೊರಗೆ ಹಾಗೂ ಹೊರ ರಾಜ್ಯದ ಬಸ್‌ಗಳು ರಾಜ್ಯದ ಒಳಗೆ ಬರುವುದಕ್ಕೆ ನಿರ್ಬಂಧ ಜಾರಿಯಲ್ಲಿದೆ.

ಪರಿಣಾಮ ಮಂಗಳೂರು ಮತ್ತು ಕಾಸರಗೋಡು ನಡುವೆ ಸಂಚರಿಸುವ ಬಸ್‌ಗಳು ಈಗ ಗಡಿ ಪ್ರದೇಶದ ತಮ್ಮ ರಾಜ್ಯದೊಳಗಿನ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದಲೇ ಹಿಂತಿರುಗುತ್ತಿವೆ. ಅಂತಾರಾಜ್ಯ ಪ್ರಯಾಣಿಸುವ ಪ್ರಯಾಣಿಕರು ಉಭಯ ಕಡೆಗಳಲ್ಲಿ ಬಸ್ ಇಳಿದು ನಡೆದು ಗಡಿ ದಾಟಿ ಇನ್ನೊಂದು ರಾಜ್ಯದ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಬಸ್ ಬದಲಿಸಿ ಪ್ರಯಾಣ ಮುಂದುವರಿಸುತ್ತಿದ್ದಾರೆ.

ಸರ್ಕಾರದ ನೀತಿಯಿಂದ ಗಡಿ ಪ್ರದೇಶದ ಬಸ್ ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಅನಗತ್ಯವಾಗಿ ಎರಡೆರಡು ಬಸ್ ಹಿಡಿದು ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

‘ಇದು ಎರಡು ಸರ್ಕಾರಗಳ ಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ತೀರ್ಮಾನ. ಅಂತಾರಾಜ್ಯ ಪ್ರಯಾಣ ಸಂಬಂಧಿಸಿ ಕರ್ನಾಟಕ ಸರ್ಕಾರದ ಕಡೆಯಿಂದ ಯಾವುದೇ ಆಕ್ಷೇಪಣೆ ಇದ್ದಂತಿಲ್ಲ. ಅನುಮತಿ ದೊರೆತರೆ ಮಂಗಳೂರು- ಕಾಸರಗೋಡು ನಡುವೆ ಬಸ್ ಓಡಿಸಲು ನಾವಂತೂ ಸಿದ್ದವಾಗಿದ್ದೇವೆ’ ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಎಸ್.ಅರುಣ್ ತಿಳಿಸಿದ್ದಾರೆ.