ಕೊಳ್ಳೇಗಾಲ: ಮುಸ್ಲಿಂ ವೇಷಭೂಷಣ ಧರಿಸಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಬಾಲಕ ಸೇರಿದಂತೆ ಮೂವರನ್ನು ಮಂಗಳವಾರ ಈದ್ಗಾ ಮೊಹಲ್ಲಾದ ಮಸೀದಿ ಬಳಿ ಮುಸ್ಲಿಂ ಯುವಕರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.
ಬೀದರ್‌ನ ಹುಮ್ನಾಬಾದ್ ನಿವಾಸಿ ತಾನಜಿ(32), ಧನರಾಜ್(24), 15 ವರ್ಷದ ಬಾಲಕ ಭಿಕ್ಷಾಟನೆಯಲ್ಲಿ ತೊಡಗಿದ್ದವರು. ಇವರು ಇಸ್ಲಾಂ ಧರ್ಮದ ಟೋಪಿ, ಬಟ್ಟೆ, ಬ್ಯಾಗ್ ಧರಿಸಿ ಈದ್ಗಾ ಮೊಹಲ್ಲಾ ಮಸೀದಿ ಪಕ್ಕದ ಬಡಾವಣೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ವೇಳೆ ಸ್ಥಳೀಯ ನಿವಾಸಿಗಳು ಇವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಇವರು ಮಸ್ಲಿಮರಲ್ಲ ಎಂದು ತಿಳಿದ ಕಾರಣ ಈ ಬಗ್ಗೆ ಪಟ್ಟಣ ಠಾಣೆ ಪೊಲೀಸರಿಗೆ ಮುಸ್ಲಿಂ ಯುವಕರು ಮಾಹಿತಿ ನೀಡಿದ್ದಾರೆ.
ಪಿಎಸ್‌ಐ ಮಹೇಶ್, ಕಾನ್‌ಸ್ಟೆಬಲ್ ಸೋಮು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ ನಂತರ ಪೊಲೀಸ್ ಠಾಣೆಗೆ ಕರೆತಂದರು. ಮೂವರನ್ನು ವಿಚಾರಿಸಿದಾಗ ನಾವು ಮೂಲತಃ ಬೀದರ್ ಜಿಲ್ಲೆಯವರಾಗಿದ್ದು, ಬಡತನ ಇರುವ ಕಾರಣ ಹಣ ಸಂಪಾದನೆಗೆ ಮುಸ್ಲಿಂ ವೇಷ ಧರಿಸಿ ಭಿಕ್ಷಾಟನೆಯಲ್ಲಿ ತೊಡಗಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ನಂತರ ಪಿಎಸ್‌ಐ ಮಹೇಶ್ ಅವರು ಬುದ್ಧಿವಾದ ಹೇಳಿ, ಅವರ ವಿಳಾಸ ಹಾಗೂ ಮಾಹಿತಿ ಪಡೆದುಕೊಂಡು ಇನ್ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ.