ಜಿಲ್ಲೆ

ಅಂಧ ಮಕ್ಕಳಿಗೆ ಇಂಟರ್ ಪಾಯಿಂಟ್ ಸ್ಲೇಟು ವಿತರಣೆ ಜ. 4ರಂದು

ಮರಿದೇವ ಹೂಗಾರ

ಹುಬ್ಬಳ್ಳಿ: ಮಜೇಥಿಯಾ ಫೌಂಡೇಷನ್ ವತಿಯಿಂದ ಇಲ್ಲಿಯ ಆನಂದನಗರ ರಸ್ತೆಯ ಹನುಮಯ್ಯ ಬಡಾವಣೆಯ ಅಂಧ ಬಾಲಕರ ಸರ್ಕಾರಿ ಪಾಠಶಾಲೆಯಲಿಲ ಲೂಯಿಸ್ ಬ್ರೈಲ್ ಅವರ 216ನೇ ಜನ್ಮದಿನೋತ್ಸವ ಜ. 4ರಂದು ಬೆಳಗ್ಗೆ 11ಕ್ಕೆ ಏರ್ಪಾಟಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಡಾ.ಎಚ್.ಎಚ್. ಕುಕನೂರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಕೆ., ಅಂಧ ಬಾಲಕರ ಶಾಲೆಯ ಅಧೀಕ್ಷಕ ರಾಜಕುಮಾರ ಸಾಬೋಜಿ, ಶ್ರೀ ಸದ್ಗುರು ಸಿದ್ದಾರೂಢ ಸ್ವಾಮಿ ಅಂಧ ಮಕ್ಕಳ ಶಾಲೆ ಅಧ್ಯಕ್ಷ ಗುರುಸಿದ್ದೇಶ್ವರ ಲಕ್ಕುಂಡಿ ಅತಿಥಿಗಳಾಗಿ ಆಗಮಿಸುವರು. ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಅವರು ಅಧ್ಯಕ್ಷತೆ ವಹಿಸುವರು. ಅಂಧ ಮಕ್ಕಳಿಗೆ 105 ಇಂಟರ್ ಪಾಯಿಂಟ್ ಸ್ಲೇಟು, ಸ್ಟೈಲಸ್ ಮತ್ತು ಬ್ರೈಲ್ ಪೇಪರ್‌ಗಳ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.