ಜಿಲ್ಲೆ

ಮಹಿಳೆಯರ ಸಬಲೀಕರಣಕ್ಕಾಗಿ ಸಹಕರಿಸೋಣ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಹಿಳೆಯರು ಎಲ್ಲ ರಂಗದಲ್ಲೂ ಮುಂಚೂಣಿ ಸ್ಥಾನವನ್ನು ಪಡೆಯಬೇಕು. ಮಹಿಳೆಯರ ಸಬಲೀಕರಣಕ್ಕೆ ನಾವೆಲ್ಲರೂ ಶ್ರಮಿಸೋಣ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಸರ್‌ಎಂವಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸೈಕ್ಲೋಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಮಹಿಳೆಯರು ಪಾತ್ರ ದೊಡ್ಡದು. ಸ್ವಾವಲಂಬಿ ಜತೆಗೆ ಆರೋಗ್ಯವಂತರಾದರೆ ನಿಜಕ್ಕೂ ಮಹಿಳಾ ಸ್ವಶಕ್ತಿಕರಣ ಯಶಸ್ವಿಯಾದಂತೆ. ಈ ನಿಟ್ಟಿನಲ್ಲಿ ಸೈಕ್ಲೋಥಾನ್‌ನಲ್ಲಿ ಭಾಗವಹಿಸಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಜಿಲ್ಲೆಯ ಎಲ್ಲ ಭಾಗದಿಂದಲ್ಲೂ ಮಹಿಳೆಯರು ಮತ್ತು ಪುರುಷರು ಭಾಗವಹಿಸಿ ಸೈಕ್ಲೋಥಾನ್ ಅನ್ನು ಯಶಸ್ವಿಗೊಳಿಸಿದ್ದಾರೆ. ಕೇವಲ 35 ನಿಮಿಷಗಳಲ್ಲಿ 10 ಕಿ.ಮೀ ದೂರ ಕ್ರಮಿಸಲಾಗಿದೆ. ಮಹಿಳೆಯರ ಏಳಿಗೆಗಾಗಿ ಕೇವಲ ಮಹಿಳೆಯರಷ್ಟೇ ಶ್ರಮಿಸಿದರೆ ಸಾಕಾಗುವುದಿಲ್ಲ. ಸಮಾಜದಲ್ಲಿ ಸಮಾನತೆ ಸಾಧಿಸಲು ಅಭಿವೃದ್ಧಿಯತ್ತ ಸಾಗಲು ಪುರುಷರ ಸಹಭಾಗಿತ್ವವವೂ ಸಹ ಅಗತ್ಯ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ, ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಇತರರಿದ್ದರು.