ಮಂಡ್ಯ: ಮಹಿಳೆಯರು ಕುಟುಂಬದಲ್ಲಿ ಕೆಲಸ ನಿರ್ವಹಿಸುವುದರೊಂದಿಗೆ ಸಮಾಜದಲ್ಲೂ ಸಾಧನೆ ಮಾಡುತ್ತಾ ಮನೆ ಮತ್ತು ಲೋಕದ ದೀಪವನ್ನು ಬೆಳಗಿಸುವ ಶಕ್ತಿಯಾಗಿದ್ದಾಳೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರ ಅಭಿವೃದ್ಧಿಗೆ ಬೆಂಬಲ ನೀಡಿದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಒದಗಿಸಬೇಕು ಎಂದರು.
ಹೆಣ್ಣಿಲ್ಲದೆ ಜೀವ ಮತ್ತು ಜೀವನವಿಲ್ಲ. ಮಹಿಳೆ ಪ್ರಪಂಚದ ದೊಡ್ಡ ಶಕ್ತಿ. ಮಹಿಳೆಗೆ ಇನ್ನೊಂದು ಜೀವಕ್ಕೆ ಜನ್ಮ ನೀಡುವ ಶಕ್ತಿ ಹಾಗೂ ಇಡೀ ಕುಟುಂಬವನ್ನು ನಿರ್ವಹಿಸುವ ಶಕ್ತಿ ಇದೆ. ಸ್ವಾಮಿ ವಿವೇಕಾನಂದರು ಮಹಿಳೆಯರಿಗೆ ಅಂತರಿಕವಾಗಿ ಮಹಾಶಕ್ತಿ ಇದೆ. ಪುರುಷರು, ಮಹಿಳೆಯರ ಶಕ್ತಿ ಕುಂದಿಸದೆ ಇದ್ದರೆ ಸಾಕು. ಮಹಿಳೆ ತಾನಾಗಿಯೇ ಸಮಾಜದಲ್ಲಿ ಬೆಳೆಯುತ್ತಾಳೆ ಎಂದು ಹೇಳಿದ್ದಾರೆ. ಅದನ್ನು ಪಾಲಿಸೋಣ. ಮಹಿಳೆಯರನ್ನು ಪ್ರಕೃತಿ ಹಾಗೂ ಭೂಮಿಗೆ ಹೋಲಿಸುತ್ತಾರೆ. ಸಾಮಾನ್ಯವಾಗಿ ಸೂಪರ್‌ಮೆನ್ ಎಂಬ ಪದ ಕೇಳಿಬರುತ್ತದೆ. ಆದರೆ ಸೂಪರ್‌ವುಮೆನ್ ಎಂಬ ಪದ ಹೇಳಲು ಸಮಾಜ ತಯಾರಿಲ್ಲ. ಇದನ್ನು ಬದಲಾಯಿಸಿ ಎಲ್ಲರೂ ಸೂಪರ್‌ವುಮೆನ್ ಆಗಿ ಹೊರಹೊಮ್ಮಿ. ಮಹಿಳಾ ದಿನಾಚರಣೆ ಆತ್ಮಾವಲೋಕಲನದ ವೇದಿಕೆಯಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಸ್ವಾತಂತ್ರ್ಯಕ್ಕೂ ಹಿಂದೆ ಮಹಿಳೆಯರು ಕೇವಲ ಮನೆಯ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದರು. ಆದರೆ ಇಂದು ಅಟೋ ರೀಕ್ಷಾ ಚಾಲನೆಯಿಂದ ಹಿಡಿದು ಅಂತರಿಕ್ಷಾ ತಲುಪುವ ರಾಕೆಟ್ ಅನ್ನು ಉಡಾವಣೆ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದು ಮಹಿಳೆಯರಲ್ಲಿ ಎಂತಹ ಅಭೂತಪೂರ್ವ ಆತ್ಮವಿಶ್ವಾಸ ಮತ್ತು ಶ್ರದ್ಧೆ ಇದೆ ಎಂಬುದನ್ನು ತೋರುತ್ತದೆ ಎಂದರು.
ಮಹಿಳೆಯರ ರಕ್ಷಣೆ ಹಾಗೂ ಹಕ್ಕುಗಳನ್ನು ಕಾಪಾಡಲು ಹಲವಾರು ಬಲಿಷ್ಠ ಕಾನೂನುಗಳನ್ನು ಬಿಎನ್‌ಎಸ್ ಕಾಯ್ದೆಯಲ್ಲಿ ತರಲಾಗಿದೆ. ಮಹಿಳೆಯರು ತಮ್ಮ ವಿರುದ್ಧ ಅನ್ಯಾಯವಾದಾಗ ಧೈರ್ಯವಾಗಿ ದನಿ ಎತ್ತಬೇಕು. ಇಂದಿನ ಸಮಾಜದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರನ್ನು ತೇಜೋವದೆ ಮಾಡಿ ಗೌರವಕ್ಕೆ ಧಕ್ಕೆ ತರುತ್ತಾರೆ. ಇವುಗಳ ವಿರುದ್ಧವು ಗಟ್ಟಿಯಾಗಿ ಹೋರಾಟ ಮಾಡುವ ದಿಟ್ಟತನವನ್ನು ಮಹಿಳೆಯರು ಬೆಳಸಿಕೊಳ್ಳಬೇಕಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಮಾತನಾಡಿ, ಪ್ರಸ್ತುತ 21ನೇ ಶತಮಾನವು ಮಹಿಳೆಯರ ಶತಮಾನ ಎಂದರೆ ತಪ್ಪಾಗುವುದಿಲ್ಲ. ಈಗಿನ ಕಾಲದಲ್ಲಿ ಮಹಿಳೆಯರು ಸ್ವಾವಲಂಬಿಯಾಗಿ ಬುದುಕುತ್ತಿರುವುದನ್ನು ನಾವು ಕಾಣಬಹುದು. ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯರು ಕೇವಲ ಗೃಹ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದರು. ಸ್ವಾತಂತ್ರ್ಯದ ನಂತರ ನಮ್ಮ ಸಂವಿಧಾನವು ಮಹಿಳೆಯರಿಗೆ ಉತ್ತಮವಾದ ಹಕ್ಕು, ಸ್ಥಾನಮಾನವನ್ನು ನೀಡಿರುವುದು ನಿಜಕ್ಕೂ ಶ್ಲಾಘನೀಯ. ಕಾನೂನಿನ ವ್ಯವಸ್ಥೆಯ ಮೂಲಕ ದೌರ್ಜನ್ಯದ ವಿರುದ್ಧ ಮಹಿಳೆಯರು ಹೋರಾಡುವುದು ಬಹಳ ಮುಖ್ಯ. ಸಂವಿಧಾನದ ಹಕ್ಕುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಪೊಲೀಸ್ ಆರಕ್ಷಕ ಉಪ ನಿರೀಕ್ಷಕಿ ಸುಮಾರಾಣಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಮೂರ್ತಿ, ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಬಿ.ಎಸ್.ಸೀತಾಲಕ್ಷ್ಮೀ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪುಷ್ಪಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಂಜುಳಾ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ರೂಪಶ್ರೀ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಧುಶ್ರೀ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಇತರರಿದ್ದರು.