ಚಿಕ್ಕಮಗಳೂರಿನ ಎಂಇಎಸ್ ಸಂಸ್ಥೆಯಲ್ಲಿ ವಿಜಯವಾಣಿ ಕನ್ನಡ ದಿನಪತ್ರಿಕೆ ಹಾಗೂ ಲುಕ್‌ಬುಕ್ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕಿಯರನ್ನು ಸನ್ಮಾನಿಸಲಾಯಿತು. ವಿಜಯವಾಣಿ ಸ್ಥಾನಿಕ ಸಂಪಾದಕ ಚಂದ್ರಶೇಖರ್ ಶೃಂಗೇರಿ, ಎಂಇಎಸ್ ಗೌರವ ಕಾರ್ಯದರ್ಶಿ ಡಾ. ಡಿ.ಎಲ್.ವಿಜಯಕುಮಾರ್, ಡಾ. ಜಿ.ಎಂ.ಗಣೇಶ್, ಉಮಾ ನಾಗೇಶ್, ಅಪರ್ಣಾ ಇತರರಿದ್ದರು.  
ಜಿಲ್ಲೆ

ವಿಜಯವಾಣಿ, ಲುಕ್‌ಬುಕ್ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ; ಸಾಧಕಿಯರಿಗೆ ಸನ್ಮಾನ

ಚಿಕ್ಕಮಗಳೂರು: ಯಾವುದೇ ವೃತ್ತಿಗಳಿಗೆ ಒಂದು ಅವಧಿ ಎನ್ನುವುದಿರುತ್ತದೆ. ಆದರೆ ಗೃಹಿಣಿಗೆ ಯಾವುದೇ ಅವಧಿಯೂ ಇಲ್ಲ. ಬೆಳಗ್ಗೆ ಎದ್ದು ಬಾಗಿಲು ತೆರೆಯುವುದರಿಂದ ರಾತ್ರಿ ಮನೆ ಬಾಗಿಲು ಹಾಕುವವರೆಗೆ ಎಲ್ಲ ಜವಾಬ್ದಾರಿ ಆಕೆಯ ಮೇಲಿರುತ್ತದೆ. ಹೀಗಾಗಿ ಗೃಹಿಣಿಯ ಸಂಬಳವನ್ನು ಅಳೆಯಲು ಸಾಧ್ಯವೇ ಇಲ್ಲ ಎಂದು ವಕೀಲೆ ಹಾಗೂ ಜಿಲ್ಲಾ ಗೈಡ್ಸ್ ಆಯುಕ್ತೆ ಡಿ.ಎಸ್.ಮಮತಾ ಅಭಿಪ್ರಾಯಪಟ್ಟರು.

ಎಂಇಎಸ್ ಸಂಸ್ಥೆಯ ಎಂ.ಎಲ್.ಮಂಜಯ್ಯ ಶೆಟ್ಟಿ ನರಸಿಂಹ ಶೆಟ್ಟಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ವಿಜಯವಾಣಿ ಕನ್ನಡ ದಿನಪತ್ರಿಕೆ ಹಾಗೂ ಲುಕ್‌ಬುಕ್ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಗೃಹಿಣಿಯ ಸಾಧನೆಯನ್ನು ಅಳೆಯಲು ಸಾಧ್ಯವಿಲ್ಲ. ಆಕೆ ಅತಿ ಹೆಚ್ಚು ಒತ್ತಡದಲ್ಲಿ ಇದ್ದರೂ ಬೇರೆಯವರ ಎದುರು ತೋರಿಸುವುದಿಲ್ಲ. ಆದರೆ ಕುಟುಂಬದವರಿಂದ ಆಕೆ ಬಯಸುವುದು ಕೇವಲ ಪ್ರೀತಿ ಮಾತ್ರ ಎಂದು ಹೇಳಿದರು.
ಹೆಣ್ಣನ್ನು ಅಳತೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಯಾರ ಕಲ್ಪನೆಗೂ ನಿಲುಕದವಳೆ ಹೆಣ್ಣು. ಒಬ್ಬ ಮಹಿಳೆ ಸುಮ್ಮನಿದ್ದಾಳೆ ಎಂದರೆ ಆಕೆ ಏನನ್ನು ಮಾಡುತ್ತಿಲ್ಲ ಎಂದರ್ಥವಲ್ಲ. ಬದಲಿಗೆ ಆಕೆ ಮನಸ್ಸಿನಲ್ಲಿಯೇ ಹಲವು ಆಲೋಚನೆಗಳನ್ನು ಒರೆಗೆ ಹಚ್ಚಿದ್ದಾಳೆ ಎಂದೇ ಅರ್ಥ. ಹೀಗಾಗಿಯೇ ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಪುರುಷರನ್ನು ಮೀರಿಸುವಂತೆ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಎಂಇಎಸ್ ಸಂಸ್ಥೆ ಗೌರವ ಕಾರ್ಯದರ್ಶಿ ಡಾ. ಡಿ.ಎಲ್.ವಿಜಯಕುಮಾರ್ ಮಾತನಾಡಿ, ಸಾಧನೆ ಎನ್ನುವುದು ಸಾಧಕರ ಸ್ವತ್ತು. ಸಣ್ಣದಾಗಿ ಮನೆಯಲ್ಲಿಯೇ ಉದ್ದಿಮೆ ಆರಂಭಿಸಿದ ಮಹಿಳೆಯರು ದೊಡ್ಡ ಉದ್ದಿಮೆದಾರರಾಗಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದೆಯೇ ಇವೆ. ಇನ್ನು ಸಾಕಷ್ಟು ಮಂದಿ ಎಲೆಮರೆ ಕಾಯಿಯಂತೆ ಇದ್ದು ಸಮಾಜ ಸೇವೆ ಮಾಡುತ್ತಿದ್ದಾರೆ. ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಿದಾಗ ಅದು ಇತರರು ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮಹಿಳೆಯರು ಎಲ್ಲ ಕ್ಷೇತ್ರದಲ್ಲಿಯೂ ದಾಪುಗಾಲು ಇರುವ ಮೂಲಕ ಜಗತ್ತಿನಲ್ಲಿ ಪುರುಷರಿಗೆ ಸರಿಸಮಾನವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಕಲೆ, ಕ್ರೀಡೆ, ರಾಜಕೀಯ ಸೇರಿದಂತೆ ವಿವಿಧ ರಂಗಗಳಲ್ಲಿ ನಾರಿಯ ಶಕ್ತಿ ಇನ್ನೂ ಹೆಚ್ಚು ಬಲಗೊಳ್ಳಬೇಕಿದೆ. ಆರ್ಥಿಕ ಸ್ವಾವಲಂಬನೆ ಬದುಕಿಗೆ ಹಾಗೂ ಕುಟುಂಬಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಮಹಿಳೆ ಸಮಾಜದ ಮುನ್ನೆಲೆಗೆ ಬರುವ ಕೆಲಸ ಮಾಡಬೇಕಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಶುಭಾ ವಿಜಯಕುಮಾರ್, ಮಹಿಳೆಯನ್ನು ಪೂಜಿಸುವಲ್ಲಿ ದೇವರು ನೆಲೆಸಿರುತ್ತಾನೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ತಿರಸ್ಕಾರ ಮಾಡುವುದನ್ನು ನೋಡುತ್ತಿದ್ದೇವೆ. ಶತಮಾನಗಳ ಹೋರಾಟದ ಫಲವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆರಂಭಗೊಂಡಿದೆ. ಹಿಂದೆ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಇದೀಗ ಒಂದೊಂದೇ ಹಕ್ಕನ್ನು ಪಡೆದು ಪುರುಷರಿಗೆ ಸರಿ ಸಮಾನವಾಗಿ ಸಾಧನೆ ಮಾಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಮಹಿಳೆಯರು ಸಂಘಟಿತರಾದಾಗ ಮಾತ್ರ ಇನ್ನು ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮಹಿಳೆಯರು ಹಿಂಜರಿಕೆ ಬಿಟ್ಟು ಸಾಧನೆ ಮಾಡಲು ಮುಂದಾಗಬೇಕು. ಹೀಗೆ ಮುಂದೆ ಬರುವ ಮಹಿಳೆಯರಿಗೆ ಸರಿಯಾದ ಪ್ರೋತ್ಸಾಹ ಸಿಕ್ಕಿದರೆ ಎಂತದ್ದೇ ಸಾಧನೆಯನ್ನಾದರೂ ಮಾಡಲು ಶಕ್ತರಾಗುತ್ತಾರೆ. ಹೆಣ್ಣಿಗೆ ಹೆಣ್ಣೇ ಶತ್ರುವಾಗಿದ್ದಾಳೆ. ವರದಕ್ಷಿಣೆ ಕಿರುಕುಳ ಹಾಗೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳಲ್ಲಿ ನಾವು ಹೆಣ್ಣಿನ ಪಾತ್ರವನ್ನೇ ಹೆಚ್ಚು ನೋಡುತ್ತಿದ್ದೇವೆ. ಇದು ನಾವು ತಲೆತಗ್ಗಿಸಬೇಕಾದಂಥ ವಿಚಾರ. ಇನ್ನಾದರೂ ವರದಕ್ಷಿಣೆ ಪಿಡುಗು ತೊಲಗಿಸಲು ಹಾಗೂ ಹೆಣ್ಣು ಭ್ರೂಣ ಹತ್ಯೆ ತಡೆಯಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಜಯವಾಣಿ ಸ್ಥಾನಿಕ ಸಂಪಾದಕ ಶೃಂಗೇರಿ ಚಂದ್ರಶೇಖರ್, ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಮಹಿಳೆ ಸಶಕ್ತಗೊಂಡರೆ ಮಾತ್ರ ಕುಟುಂಬ ಹಾಗೂ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಸಮಾನತೆ ಇರುವಲ್ಲಿ ಅಭಿವೃದ್ಧಿ ಇರುತ್ತದೆ. ಆದರೆ ವರ್ಷದಲ್ಲಿ ಒಮ್ಮೆ ಮಾತ್ರ ಲಿಂಗ ಸಮಾನತೆ ಕುರಿತು ಮಾತನಾಡಲಾಗುತ್ತಿದೆ. ಇದನ್ನು ಅನುಷ್ಠಾನಕ್ಕೆ ತರುವ ಕೆಲಸವನ್ನು ಮಾಡಿದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಚಾರ್ಯ ಡಾ. ಜಿ.ಎಂ.ಗಣೇಶ್ ವಹಿಸಿದ್ದರು. ಎಂವಿಎಸ್ ಪದನಿಮಿತ್ತ ಸದಸ್ಯೆ ಉಮಾ ನಾಗೇಶ್, ಲುಕ್ ಬುಕ್ ಮಾಲಕಿ ಅಪರ್ಣಾ ಇತರರಿದ್ದರು.

ವಿಚ್ಛೇದನಕ್ಕೆ ಕಾರಣವಾಗುತ್ತಿದೆ ಅಹಂ
ಇತ್ತೀಚಿನ ದಿನಗಳಲ್ಲಿ ವಿವಾಹ ವಿಚ್ಛೇದನಗಳು ಹೆಚ್ಚಾಗುತ್ತಿರುವುದಕ್ಕೆ ಮಹಿಳೆಯರ ಅಹಂ ಕಾರಣ. ಸಾಕಷ್ಟು ಪ್ರಕರಣಗಳಲ್ಲಿ ಇದನ್ನು ಗಮನಿಸಿದ್ದೇನೆ. ವಿಚ್ಛೇದನಕ್ಕೆ ಯಾವುದೇ ಕಾರಣಗಳು ಇರುವುದಿಲ್ಲ. ಆದರೆ ನಾನೇ ಹೆಚ್ಚು ಎನ್ನುವ ಮನಸ್ಥಿತಿಯಿಂದ ವಿಚ್ಛೇದನಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವಕೀಲೆ ಡಿ.ಎಸ್.ಮಮತಾ ಆತಂಕ ವ್ಯಕ್ತಪಡಿಸಿದರು. ಕೆಲ ಮಹಿಳೆಯರು ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದೂ ಆತಂಕಕಾರಿ ಸಂಗತಿ. ಕಾನೂನುಗಳು ಇರುವುದು ನಮ್ಮ ರಕ್ಷಣೆಗೆ ಹೊರತು ಬೇರೆಯವರಿಗೆ ತೊಂದರೆ ನೀಡಲು ಅಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಭ್ರೂಣ ಹತ್ಯೆ ಅಪರಾಧ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ವಿದ್ಯಾವಂತರೇ ಹೆಚ್ಚಿನ ಪ್ರಮಾಣದಲ್ಲಿ ಭ್ರೂಣ ಹತ್ಯೆಗೆ ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ. ಇದರಿಂದಾಗಿ ಲಿಂಗಾನುಪಾತ ಏರುಪೇರು ಆಗುತ್ತಿದೆ ಎಂದು ತಿಳಿಸಿದರು.
ಆರೋಗ್ಯ ತಪಾಸಣಾ ಶಿಬಿರ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಜಯವಾಣಿ ಕನ್ನಡ ದಿನಪತ್ರಿಕೆಯಿಂದ ನಗರದ ಸ್ಪಂದನ ಆಸ್ಪತ್ರೆ ಸಯೋಗದಲ್ಲಿ ಎಂ.ಎಲ್.ಮಂಜಯ್ಯ ಶೆಟ್ಟಿ ನರಸಿಂಹ ಶೆಟ್ಟಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. 150ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಸ್ಪಂದನ ಆಸ್ಪತ್ರೆ ಮುಖ್ಯಸ್ಥ ಡಾ. ಸಂತೋಷ್, ಡಾ. ಅಂಜಲಿ ಶಿವಣ್ಣ, ಡಾ. ಪ್ರೀತಮ್, ಶುಶ್ರೂಷಕಿಯರಾದ ಪೂಜಾ, ವೇದಾ ಸೇರಿದಂತೆ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಿದರು. ಆಸ್ಪತ್ರೆ ಮ್ಯಾನೇಜರ್ ಸಂದೀಪ್ ಇದ್ದರು.

ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುತ್ತಾರೆ. ಇದೇ ಸಂದರ್ಭದಲ್ಲಿ ಅವರಲ್ಲಿ ಸಾಮಾನ್ಯ ತಿಳಿವಳಿಕೆ ಕಡಿಮೆಯಾಗುತ್ತಿದೆ. ಯುವ ಜನತೆ ಅವರ ಹಕ್ಕುಗಳನ್ನು ಪಡೆಯುತ್ತಾರೆ, ಕರ್ತವ್ಯಗಳನ್ನು ಮರೆಯುತ್ತಿದ್ದಾರೆ. ನಮ್ಮ ಹಕ್ಕುಗಳನ್ನು ನಾವು ಪಡೆದಿದ್ದೇವೆ ಎಂದರೆ ಕರ್ತವ್ಯವನ್ನು ಪಾಲಿಸಲೇಬೇಕು ಎಂದರ್ಥ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು.ಡಿ.ಎಸ್.ಮಮತಾ, ವಕೀಲೆ