ಜಿಲ್ಲೆ

ನಿಸ್ವಾರ್ಥ ಮನೋಭಾವದ ಕಾರ್ಯದಿಂದ ಆತ್ಮತೃಪ್ತಿ...

ವಿಪ ಸದಸ್ಯ ಡಾ. ಧನಂಜಯ ಸರ್ಜಿ ಅಭಿಮತ

ಅಂಗಾಂಗ ದಾನ ನೋಂದಣಿ ಅಭಿಯಾನ ಉದ್ಘಾಟನೆ

ಬಿಜೆಪಿ ಮಹಿಳಾ ಮೋಚಾದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಭಾರತ ದೇಶದಲ್ಲಿ ಪ್ರತಿವರ್ಷ 50 ಲಕ್ಷ ಜನರು ಅಂಗಾಂಶ ಕೊರತೆಯಿಂದ ಮೃತಪಡುತ್ತಿದ್ದಾರೆ. ದೇವರು ಸೃಷ್ಟಿಸಿದ ಅದ್ಭುತವಾದ ದೇಹ ನಮ್ಮದು. ವಿಶ್ವದಲ್ಲಿ 7 ಬಿಲಿಯನ್​ ಜನಸಂಖ್ಯೆಯಿದ್ದು, ಒಬ್ಬರಂತೆ ಇನ್ನೊಬ್ಬರು ಇಲ್ಲ. ಆದರೂ ಒಂದು ದೇಹದಿಂದ 8 ಜನರಿಗೆ ಅಂಗ ದಾನ ಹಾಗೂ 75 ಜನರಿಗೆ ಅಂಗಾಗ ದಾನ ಮಾಡಬಹುದಾಗಿದೆ. ಸತ್ತಮೇಲೆ ಮಣ್ಣಾಗುವ ಈ ದೇಹವನ್ನು ನಿಸ್ವಾರ್ಥ ಮನೋಭಾವದಿಂದ ದಾನ ಮಾಡಿದರೆ ಆತ್ಮತೃಪ್ತಿ ಲಭಿಸುತ್ತದೆ ಎಂದು ವಿ.ಪ. ಸದಸ್ಯ ಡಾ. ಧನಂಜಯ ಸರ್ಜಿ ಅಭಿಮತ ವ್ಯಕ್ತಪಡಿಸಿದರು.

ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಶನಿವಾರ ಆಯೋಜಿಸಿದ್ದ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಅಂಗಾಂಗ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಕ್ತದಾನದಿಂದ ಆರೋಗ್ಯ ಸಬಲ

ರಕ್ತದಾನ ಅತ್ಯಂತ ಶ್ರೇಷ್ಠವಾದುದಾಗಿದೆ. ಒಮ್ಮೆ ರಕ್ತದಾನ ಮಾಡಿದರೆ 8 ಜನರ ಜೀವ ಉಳಿಸಬಹುದು. ಅಲ್ಲದೆ, ಹೆಚ್ಚು ಬಾರಿ ರಕ್ತದಾನ ಮಾಡುವುದರಿಂದ ಹೃದಯಾಘಾತ, ಬ್ರೇನ್​ ಸ್ಟ್ರೋಕ್, ಲಿವರ್​ಗೆ ತೊಂದರೆ ಆಗದು. ಕ್ಯಾನ್ಸರ್​ ಸಹ ಬರದು. ರಕ್ತದಾನ ಮಾಡುವವರ ಆರೋಗ್ಯ ಸಬಲವಾಗಿರುತ್ತದೆ ಎಂದರು.

ಮಹಿಳೆಯರಿಗೆ ಸ್ಥಾನಮಾನ

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರಕುಮಾರ್​ ಕುಂದಾಪುರ ಮಾತನಾಡಿ, ಬದಲಾದ ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌರವ, ಸ್ಥಾನಮಾನ ಲಭಿಸುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನವಾಗಿ ಮಹಿಳೆ ಸಾಧನೆ ಮಾಡುತ್ತಿದ್ದಾಳೆ. ಅಂಗಾಂಗ ದಾನಕ್ಕೂ ಮಹಿಳೆ ಹೆಜ್ಜೆ ಇಡುತ್ತಿರುವುದು ಮಹತ್ತರವಾದ ಕಾರ್ಯವಾಗಿದೆ ಎಂದರು.

ಸಾಧಕಿಗೆ ಸನ್ಮಾನ

ಮಹಿಳಾ ದಿನಾಚರಣೆ ನಿಮಿತ್ತ ಸಾಧಕಿ ಹಾಗೂ ವಿಶೇಷ ಮಕ್ಕಳಿಗೆ ನೃತ್ಯ ತರಬೇತಿ ನೀಡುವ ಮೂಲಕ ಅವರನ್ನೂ ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ವಿಶೇಷ ಕಾಳಜಿ ವಹಿಸುತ್ತಿರುವ ಅಕ್ಷತಾ ರಾವ್​ ಅವರನ್ನು ಸನ್ಮಾನಿಸಲಾಯಿತು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ್​ ಶೆಟ್ಟಿ ಹೆರ್ಗ, ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಶಿಲ್ಪಾ ಸುವರ್ಣ, ನಗರಸಭಾ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಉಪಾಧ್ಯಕ್ಷೆ ರಜಿನಿ ಹೆಬ್ಬಾರ್​, ರಾಘವೇಂದ್ರ ಕುಂದರ್​, ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ಡಾ. ಸಂಜಯ್​ ಕಿಣಿ, ದಂತ ವೈದ್ಯಕಿಯ ವಿಭಾಗದ ಡಾ. ನಿಶು ಸಿಂಗ್ಲಾ, ಜೂನಿಯರ್​ ರೆಸಿಡೆನ್ಸ್​ ಡಾ.. ಪ್ರಾಂಜಲಿ ಉಪಸ್ಥಿತರಿದ್ದರು.

ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿ ವಿದ್ಯಾ ಶಾಮಸುಂದರ್​ ವಂದೇ ಮಾತರಂ ಗೀತೆ ಹಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಾ ಆರ್​.ಕೆ. ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಳಿನಿ ಪ್ರದೀಪ್​ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಸುಜಲಾ ಎಸ್​. ಸುವರ್ಣ ವಂದಿಸಿದರು.

ಮಹಿಳೆಯರ ಆರೋಗ್ಯ ರಕ್ಷಣೆ ಅಗತ್ಯ

ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಸಂಧ್ಯಾ ರಮೇಶ್​ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಗಾಂಗ ದಾನಘೋಷಿಸಿ, ಓರ್ವ ಮಹಿಳೆ ತನ್ನ ಆರೋಗ್ಯವನ್ನೂ ಲೆಕ್ಕಿಸದೆ ವರ್ಷಪೂರ್ತಿ ಕುಟುಂಬಕ್ಕಾಗಿ, ಮಕ್ಕಳ ಜವಾಬ್ದಾರಿ, ಹಾಗೂ ಉದ್ಯೋಗವನ್ನೂ ನಿಭಾಯಿಸುವ ಶಕ್ತಿದೇವತೆಯಾಗಿದ್ದಾಳೆ. ಇತ್ತೀಚೆಗೆ ಮಹಿಳೆಯರು ಗರ್ಭಕಂಠದ ಹಾಗೂ ಸ್ತನ ಕ್ಯಾನ್ಸರ್​ಗೆ ಬಲಿಯಾಗುತ್ತಿದ್ದು, ಎಲ್ಲ ಮಹಿಳೆಯರೂ ಆರೋಗ್ಯದತ್ತ ಕಾಳಜಿ ವಹಿಸಬೇಕು. ಮಹಿಳೆಯರಿಗಾಗಿ ಈ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದೇವೆ ಎಂದರು.

ಆರೋಗ್ಯ ತಪಾಸಣೆ ಶಿಬಿರ

ಮಹಿಳಾ ದಿನಾಚರಣೆ ನಿಮಿತ್ತ ಚರ್ಮರೋಗ, ಎಲುಬು (ಮೂಳೆ) ತಪಾಸಣೆ, ದಂತ, ರಕ್ತದೊತ್ತಡ, ಮಧುಮೇಹ, ಇಸಿಜಿ ಪರೀಕ್ಷೆ, ಕಣ್ಣಿನ ಪರೀಕ್ಷೆ, ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್​ ಪರೀಕ್ಷೆ, ರಕ್ತ ತಪಾಸಣೆಯ ಉಚಿತ ಶಿಬಿರ ಆಯೋಜಿಸಲಾಗಿತ್ತು. ನೂರಾರು ಮಹಿಳೆಯರು ಶಿಬಿರದ ಪ್ರಯೋಜನ ಪಡೆದರು.

ಪಾಶ್ಚಿಮಾತ್ಯ ದೇಶದಲ್ಲಿ 10 ಲಕ್ಷಕ್ಕೆ 5 ಜನ ಹಾಗೂ ಭಾರತದಲ್ಲಿ 20 ಲಕ್ಷಕ್ಕೆ ಕೇವಲ ಒಬ್ಬರು ಮಾತ್ರ ಅಂಗಾಂಗ ದಾನ ಮಾಡುತ್ತಾರೆ. ದೇಹದಾನದಿಂದ ಮುಕ್ತಿ ಸಿಗದು ಎಂಬ ನಂಬಿಕೆಯಿದೆ. ಆದರೆ, ದೇಹದಾನದಿಂದ ಅನೇಕರ ಜೀವ ಉಳಿಸಿದ ಪುಣ್ಯ ಲಭಿಸುತ್ತದೆ. ಮಹಿಳೆಯರು ಅಂಗಾಂಗ ದಾನಕ್ಕೆ ಮುಂದೆ ಬಂದಿರುವುದು ಉತ್ತಮ ಬೆಳವಣಿಗೆ. | ಡಾ. ಧನಂಜಯ ಸರ್ಜಿ. ವಿಪ ಸದಸ್ಯ