ಮಂಡ್ಯ: ಸಾಮಾಜಿಕ ಸೇವೆ ಮಾಡಲು ಯಾವುದೇ ರೀತಿಯ ವಿದ್ಯಾರ್ಹತೆ ಅವಶ್ಯಕತೆ ಇಲ್ಲ. ಬದಲಿಗೆ ಮನಸ್ಸು, ಹೃದಯವಂತಿಕೆ ಜತೆಗೆ ಮಾನವೀಯ ಮೌಲ್ಯಗಳಿರಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಪಟ್ಟರು.
ನಗರದ ಮಾಂಡವ್ಯ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಫೆವಾರ್ಡ್ ನೇತೃತ್ವದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಾನವೀಯ ಮೌಲ್ಯಗಳಿಗಿಂತ ದೊಡ್ಡದಾದ ದೇವರು ಯಾರಲ್ಲೂ ಕಾಣಲು ಸಾಧ್ಯವಿಲ್ಲ. ಯಾವುದೇ ಪ್ರತಿಫಲಾಪೇಕ್ಷೆ ಮಾಡದೆ ಸ್ವಾರ್ಥರಹಿತವಾಗಿ ಸಾಮಾಜಿಕ ಕಳಕಳಿ ಹೊಂದಿ ಮನೋಭಾವವಿಟ್ಟು ಕೆಲಸ ಮಾಡುವುದು ಮುಖ್ಯ ಎಂದು ಹೇಳಿದರು.
ಸ್ವಯಂ ಸೇವಾ ಸಂಸ್ಥೆಗಳು ಜಿಲ್ಲೆಯಲ್ಲಿ ಯಾವ ರೀತಿ ಅಭಿವೃದ್ಧಿಪರ ಚಿಂತನೆಯ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ಕೈಗನ್ನಡಿಯಾಗಿದೆ. ಜಿಲ್ಲೆಯಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡಲು ಮಾನವೀಯತೆಯುಳ್ಳ ಹೃದಯವಂತಿಕೆ ಮನಸ್ಸಿರಬೇಕು. ಮಾನವೀಯ ಮೌಲ್ಯ ಮಾನವನಿಗೆ ಒಂದು ಮೆರುಗು, ಯಾವ ಮನುಷ್ಯ ಅಂತಹ ಗುಣಗಳನ್ನು ಅಳವಡಿಸಿಕೊಂಡು ಸಾಮಾಜಿಕ ಬದಲಾವಣೆಯ ಜತೆಗೆ ಅಭಿವೃದ್ಧಿಗೆ ಕೈಜೋಡಿಸುವ ಮನೋಭಾವ ಹೊಂದಿರುತ್ತಾರೋ ಅವರು ಮಾತ್ರ ಉತ್ತಮ ಕೆಲಸ ಮಾಡಲು ಸಾಧ್ಯ ಎಂದು ಹೇಳಿದರು.
ನಗುವಿಗಾಗಿ ಸಾಮಾಜಿಕ ಬೆಳವಣಿಗೆಯ ಅಭಿವೃದ್ಧಿಗಾಗಿ ಸುಸ್ಥಿರ ಸಮಾಜ ಕಟ್ಟಲು ಕೆಲಸ ಮಾಡುತ್ತಾರೆ. ಅಂತವರಿಗೆ ನಾವು ಸಹಕಾರ ಮಾಡಬೃಕು. ಸರ್ಕಾರ ಮಾಡದೇ ಇರುವ ಕೆಲಸಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಮಾಡಿಸಿ ಸುಧಾರಣೆ ಕಂಡಿರುವ ಸಂಗತಿಗಳು ಸಾಕಷ್ಟಿವೆ ಎಂದು ಶ್ಲಾಘಿಸಿದರು.
ಲಯನ್ಸ್ ಸಂಸ್ಥೆ ಜಿಲ್ಲಾ ಮಾಜಿ ಗರ್ವನರ್ ನಾಗರಾಜ್ ಭೈರಿ ಮಾತನಾಡಿ, ಸೇವೆ ಎಂದಿಗೂ ನಮ್ಮೆಲ್ಲರಿಗೂ ಆದರ್ಶವಾಗಬೇಕು. ಅಂತಹ ಸೇವೆಯನ್ನು ನಿಸ್ವಾರ್ಥವಾಗಿ ಸ್ವಯಂ ಸೇವಾ ಸಂಸ್ಥೆಗಳು ಮಾಡುತ್ತಿವೆ. ಸ್ವಾತಂತ್ರ್ಯ ನಂತರ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಬಹಳಷ್ಟು ಹುಟ್ಟಿಕೊಂಡಿವೆ. ಕೊಡಗು ಹಾಗೂ ಉತ್ತರ ಕರ್ನಾಟಕ ಪ್ರವಾಹ ಕಂಡ ಸಂದರ್ಭದಲ್ಲಿ ಸ್ಪಂದಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿರುವುದನ್ನು ಕಂಡಿದ್ದೇವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾಶಿವಲಿಂಗಯ್ಯ, ಮಾನವೀಯ ಸೇವೆಯ ಮಹತ್ವವನ್ನು ಅರಿತು ಸ್ವಯಂ ಸೇವಾ ಸಂಸ್ಥೆಗಳು ಕೆಲಸ ಮಾಡಿದಾಗ ಅನುಭವ ಪಡೆಯಬಹುದು. ಸರ್ಕಾರ ಏನೇ ಕೆಲಸ ಮಾಡಬೇಕಾದರೂ ಎಲ್ಲರಿಗೂ ಸಮಬಾಳು ಸಿಗಲೆಂದು ಕೆಲಸ ಮಾಡುತ್ತದೆ. ಅಂತಹ ಸಹೃದಯತೆ ಎಲ್ಲರಲ್ಲೂ ಇರಬೇಕು. ಮೊದಲೆಲ್ಲ ಸಮಾಜ, ಸರ್ಕಾರ, ಮಾರುಕಟ್ಟೆ ಎಂಬುವುದು ಇತ್ತು. ಜಾಗತೀಕರಣದ ಪ್ರಭಾವದಿಂದಾಗಿ ಈಗ ಮೊದಲು ಮಾರುಕಟ್ಟೆ, ಸರ್ಕಾರ, ಸಮಾಜ ಬಂದಿದೆ. ಆದ್ದರಿಂದ ಮೌಲ್ಯಯುತ ಸಮಾಜ ಕಟ್ಟಬೇಕಾದರೆ ತಂತ್ರಜ್ಞಾನವನ್ನು ಅರಿಯಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಹಿರಿಯ ಸಹಕಾರಿ ಕೌಡ್ಲೆ ಚೆನ್ನಪ್ಪ, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು, ಫೆವಾರ್ಡ್- ಕೆ ರಾಜ್ಯಾಧ್ಯಕ್ಷ ಮಹೇಶ್ ಚಂದ್ರಗುರು, ಜಿಲ್ಲಾಧ್ಯಕ್ಷ ಡಾ.ನಾಗಪ್ಪ, ಕಾರಸವಾಡಿ ಮಹಾದೇವು, ದೇವರಾಜ್ ಕೊಪ್ಪ ಇತರರಿದ್ದರು.