ಜಿಲ್ಲೆ

ಫೆ.27ರಂದು ನಗರದಲ್ಲಿ ವಿಚಾರಗೋಷ್ಠಿ: ಫೆವಾರ್ಡ್-ಕೆ ರಾಜ್ಯಾಧ್ಯಕ್ಷ ಮಹೇಶ್ ಚಂದ್ರಗುರು ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಅಂತಾರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆ ಅಂಗವಾಗಿ ಫೆ.27ರಂದು ನಗರದಲ್ಲಿ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದಿಂದ(ಫೆವಾರ್ಡ್) ವಿಚಾರಗೋಷ್ಠಿ ಆಯೋಜಿಸಲಾಗಿದೆ ಎಂದು ಫೆವಾರ್ಡ್-ಕೆ ರಾಜ್ಯಾಧ್ಯಕ್ಷ ಮಹೇಶ್ ಚಂದ್ರಗುರು ಹೇಳಿದರು.

ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಸುಸ್ಥಿರ ಭವಿಷ್ಯ ನಿರ್ಮಿಸೋಣ ಘೋಷಣೆಯೊಂದಿಗೆ ಸಂಘಟಿಸಿರುವ ಕಾರ್ಯಕ್ರಮವು ಎಸ್.ಬಿ ಸಮುದಾಯ ಭವನದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಡಾ.ಕುಮಾರ ಕಾರ್ಯಕ್ರಮ ಉದ್ಘಾಟಿಸುವರು. ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

11.30ಕ್ಕೆ ಮೊದಲ ವಿಚಾರ ಗೋಷ್ಠಿಯಲ್ಲಿ ‘ಅಭಿವೃದ್ಧಿ ಕ್ಷೇತ್ರದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ/ಕೊಡುಗೆ /ಮೈಲಿಗಲ್ಲು’ ಕುರಿತು ಮಹೇಶ್ ಚಂದ್ರಗುರು ವಿಷಯ ಮಂಡಿಸಲಿದ್ದಾರೆ. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 12.15ಕ್ಕೆ ಎರಡನೇ ಗೋಷ್ಠಿಯಲ್ಲಿ ‘ಸಮುದಾಯದ ಅಭಿವೃದ್ಧಿಯಲ್ಲಿ ಸರ್ಕಾರ, ಮಾಧ್ಯಮ ಮತ್ತು ಸ್ವಯಂ ಸೇವಾ ಸಂಸ್ಥೆಗಳು’ ಕುರಿತು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ, ಅಭಿವೃದ್ಧಿ ಚಿಂತಕ ಡಾ.ವರ್ಷ ವಿಚಾರ ಮಂಡಿಸುವರು. ಮಧ್ಯಾಹ್ನ 1ಗಂಟೆಗೆ 3ನೇ ಗೋಷ್ಠಿಯಲ್ಲಿ ‘ಜಿಲ್ಲೆಯ ಅಭಿವೃದ್ಧಿ ಮುನ್ನಡೆಯಲ್ಲಿ ನಾಗರಿಕ ಸೇವಾ ಸಂಸ್ಥೆಗಳ ಪಾತ್ರ’ ಕುರಿತಂತೆ ಉದ್ಯಮ ಅಭಿವೃದ್ಧಿ ತಜ್ಞ ಮಂಜುನಾಥ್ ವಿಚಾರ ಮಂಡಿಸಲಿದ್ದು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು.

ಸಂಜೆ 4 ಗಂಟೆಗೆ ಫೆವಾರ್ಡ್ ಜಿಲ್ಲಾಧ್ಯಕ್ಷ ಡಾ.ನಾಗಪ್ಪ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ರವಿಕುಮಾರ್ ಗಣಿಗ, ಎಂಎಲ್‌ಸಿಗಳಾದ ದಿನೇಶ್ ಗೂಳಿಗೌಡ ಮತ್ತು ಮಧು ಜಿ.ಮಾದೇಗೌಡ ಭಾಗವಹಿಸಲಿದ್ದಾರೆ. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ 11 ಜನರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಫೆವಾರ್ಡ್ ಜಿಲ್ಲಾಧ್ಯಕ್ಷ ಡಾ.ನಾಗಪ್ಪ, ರಾಜ್ಯ ಸಮಿತಿ ಸದಸ್ಯ ಕೃಷ್ಣೇಗೌಡ, ಜಿಲ್ಲಾ ಕಾರ್ಯದರ್ಶಿ ಕಾರಸವಾಡಿ ಮಹದೇವ, ನಿರ್ದೇಶಕರಾದ ದೇವರಾಜ್ ಕೊಪ್ಪ, ಥಾಮಸ್ ಬೆಂಜಮಿನ್ ಇದ್ದರು.