ಮಂಡ್ಯ: ಸ್ನೇಹ ಬಳಗ ವೃದ್ದಿಸುವ ಟೀ ಪಾನೀಯ ದಣಿದ ಮನಸ್ಸಿಗೆ ಉಲ್ಲಾಸ ಚೇತೋಹಾರಿಕೆ ನೀಡುತ್ತದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಜಿಲ್ಲಾ ಗರ್ವನರ್ ಕೆ.ಟಿ.ಹನುಮಂತು ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಸುಭಾಷ್‌ನಗರದಲ್ಲಿರುವ ಟೀ ಬೇಂಚ್ ಅಂಗಡಿಯ ಆವರಣದಲ್ಲಿ ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷಿನಲ್ ಮಂಡ್ಯ ಜಿಲ್ಲೆ 269ಎಸ್ ಮತ್ತು ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಟೀ ದಿನಾಚರಣೆ ಅಂಗವಾಗಿ ಉಚಿತ ಟೀ ವಿತರಣೆ ಹಾಗೂ ಕಾರ್ಮಿಕರಿಗೆ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಶ್ವದಲ್ಲಿ ನೀರಿನ ನಂತರ ಅತಿ ಹೆಚ್ಚು ಸೇವಿಸುವ ಪಾನೀಯವಾದ ಚಹಾ ಸುದೀರ್ಘ ಮತ್ತು ಶ್ರೀಮಂತ ಇತಿಹಾಸ ಹೊಂದಿದೆ. 5,000 ವರ್ಷಗಳ ಹಿಂದಿನ ಸೇವನೆಯ ಪುರಾವೆಗಳಿವೆ. ಅತಿ ಹೆಚ್ಚು ಟೀ ಬೆಳೆಯುವ ಮತ್ತು ರಫ್ತು ಮಾಡುವ ರಾಷ್ಟ್ರಗಳಲ್ಲಿ ಭಾರತಕ್ಕೆ 2ನೇ ಸ್ಥಾನವಿದೆ. ಮೊದಲ ಸ್ಥಾನವನ್ನು ಚೀನಾ ಪಡೆದಿದೆ. ಮಿತ ಮತ್ತು ಹಿತವಾಗಿ ಟೀ ಸೇವನೆಯಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಆಯಾಸ ನೀಗಿಸಿಕೊಂಡು ಚೇತೋಹಾರಿಕೆ ಪಡೆಯಬಹುದು. ಹೃದಯ ಸಂಬಂಧಿ ರೋಗಗಳನ್ನು ದೂರವಿಡಬಹುದು ಎಂದು ಮಾಹಿತಿ ನೀಡಿದರು.
ಚಹಾದ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಚಹಾ ಉದ್ಯಮವು ಆದಾಯ ಮತ್ತು ಉದ್ಯೋಗಗಳ ಪ್ರಮುಖ ಮೂಲವಾಗಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಲಕ್ಷಾಂತರ ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಚಹಾ ಉತ್ಪಾದನೆಯನ್ನು ಅವಲಂಬಿಸಿವೆ. ಈ ವರ್ಷದ ಅಂತಾರಾಷ್ಟ್ರೀಯ ಚಹಾ ದಿನವು ಬೆಳೆಯಿಂದ ಕಪ್‌ವರೆಗೆ ಚಹಾ ಉತ್ಪಾದನಾ ಸರಪಳಿಯ ಉದ್ದಕ್ಕೂ ಮಹಿಳೆಯರು ವಹಿಸುವ ಪಾತ್ರವನ್ನು ನಿರ್ದಿಷ್ಟವಾಗಿ ಗೌರವಿಸುತ್ತದೆ ಎಂದು ಹೇಳಿದರು.
ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ಚಹಾ ಉದ್ಯಮ ನಿರುದ್ಯೋಗ ಸಮಸ್ಯೆ ನೀಗಿಸುತ್ತಿದೆ. ಗ್ರಾಮೀಣರಲ್ಲಿ ಆದಾಯದ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಚಹಾ ಉತ್ಪಾದಿಸುವ ದೇಶಗಳಲ್ಲಿ ಆಹಾರ ಭದ್ರತೆಯನ್ನು ಸುಧಾರಿಸುತ್ತಿದೆ. ಪಾನೀಯ ಪ್ರಿಯರಿಗೆ 150ಕ್ಕೂ ಹೆಚ್ಚು ಟೀ ಪಾನೀಯಾಗಳು ಲಭ್ಯವಿವೆ. ಸಾಧಾರಣ ಟೀ ಯೋಂದಿಗೆ ಶುಂಠಿ ಟೀ, ಪುದೀನಾ ಟೀ, ಮಸಾಲೆ ಟೀ, ನಿಂಬೆ ಟೀ, ಕಪ್ಪು ಟೀ, ಕೋಡ್ಲ್ ಟೀ, ಒಣಹಣ್ಣುಗಳ ಟೀ ಹೀಗೆ ಹೆಸರಿಸಬಹುದು ಎಂದು ತಿಳಿಸಿದರು.
ಅಲಯನ್ಸ್ ಸಂಸ್ಥೆ ಜಿಲ್ಲಾಧ್ಯಕ್ಷ ರಮೇಶ್, ಸಕ್ಕರೆನಾಡು ಅಲಯನ್ಸ್ ಸಂಸ್ಥೆ ಅಧ್ಯಕ್ಷ ಸೋಮಶೇಖರ್, ಪ್ರಾಧ್ಯಾಪಕ ಲಿಂಗರಾಜು, ಎಸ್.ಎಂ.ಲೋಕೇಶ್, ಮರೀಗೌಡ, ಜಿ.ಬಿ.ಕುಮಾರ್ ಮತ್ತಿತರರಿದ್ದರು.
ಇದೇ ಸಂದರ್ಭದಲ್ಲಿ ಕಾರ್ಮಿಕರಾದ ಸಂಜಯ್ ಮತ್ತು ಕಿರಣ್ ಅವರನ್ನು ಅಭಿನಂದಿಸಲಾಯಿತು. ನಂತರ ಸಾರ್ವಜನಿಕರಿಗೆ ಉಚಿತವಾಗಿ ವಿವಿಧ ಬಗೆಯ ಟೀ ಪಾನಿಯವನ್ನು ವಿತರಿಸಲಾಯಿತು.