ಜಿಲ್ಲೆ

ಸುಸ್ಥಿರ ಸಮಾಜಕ್ಕಾಗಿ ಸಂಶೋಧನೆ ಅನಿವಾರ್ಯ :ಪ್ರೊ.ಎಸ್. ಸತೀಶ್ಚಂದ್ರ ಅಭಿಪ್ರಾಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಜಾಗತಿಕ ಮಟ್ಟದಲ್ಲಿ ಜನರು ಸುಖ, ಶಾಂತಿ, ನೆಮ್ಮದಿಯಿಂದ ಇರುವುದರ ಜತೆಗೆ ಆರೋಗ್ಯಪೂರ್ಣ ಸುಸ್ಥಿರ ಸಮಾಜ ನಿರ್ಮಾಣವಾಗಬೇಕಿದ್ದು, ಇದಕ್ಕಾಗಿ ರಸಾಯನಶಾಸ್ತ್ರದಲ್ಲಿ ಸಂಶೋಧನೆ ಅನಿವಾರ್ಯ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್. ಸತೀಶ್ಚಂದ್ರ ಅಭಿಪ್ರಾಯಪಟ್ಟರು.

ಎಸ್‌ಡಿಎಂ ಸ್ವಾಯತ್ತ ಕಾಲೇಜಿನಲ್ಲಿ ರಸಾಯನಶಾಸ್ತ್ರ, ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಆಶ್ರಯದಲ್ಲಿ ಇಂದ್ರಪ್ರಸ್ಥ ಸಭಾಂಗಣದಲ್ಲಿ ಬುಧವಾರ ಮೂರು ದಿನಗಳ ಸುಸ್ಥಿರ ಸಮಾಜಕ್ಕಾಗಿ ರಸಾಯನಶಾಸ್ತ್ರದಲ್ಲಿ ಸಂಶೋಧನೆ ಎಂಬ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಜತೆಗೆ ಸುಖ-ಸೌಲಭ್ಯಗಳು ಹೆಚ್ಚಿದಂತೆ ಮನುಷ್ಯನ ಆರೋಗ್ಯ ಸ್ಥಿತಿಯೂ ಹದಗೆಡುತ್ತಿದೆ. ಇದರೊಂದಿಗೆ ಭೀಕರ ರೋಗಗಳು ಬಾಧಿಸುತ್ತಿವೆ. ರೋಗಗಳ ಪತ್ತೆಹಚ್ಚುವಿಕೆಗೆ ಹಾಗೂ ಚಿಕಿತ್ಸೆಗಾಗಿ ರಸಾಯನಶಾಸ್ತ್ರದಲ್ಲಿ ಹೆಚ್ಚಿನ ಅಧ್ಯಯನ, ಸಂಶೋಧನೆ ಇಂದು ಅನಿವಾರ್ಯ ಎಂದರು.

ಪ್ರಾಂಶುಪಾಲ ಪ್ರೊ.ಪಿ.ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ಜರ್ಮನಿಯ ಸಂಶೋಧಕ ಡಾ.ಅಲ್ಟ್ರಿಚ್ ಕೆ.ರೋಝಲರ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ವಿಜ್ಞಾನಿ ಡಾ.ಭಾನು ಮಂಜುನಾಥ್ ನಾರಾಯಣ, ಎಸ್‌ಡಿಎಂ ಕಾಲೇಜು ಹಿರಿಯ ವಿದ್ಯಾರ್ಥಿ ಡಾ.ರಮೇಶ ಕೆ., ಮಂಗಳೂರು ವಿವಿ ನಿವೃತ್ತ ರಸಾಯನಶಾಸ್ತ್ರ ಪ್ರಾಧ್ಯಾಪಕ ಪ್ರೊ.ಬಿ.ಶಿವರಾಮ ಹೊಳ್ಳ ಉಪಸ್ಥಿತರಿದ್ದರು. ಎಸ್‌ಡಿಎಂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಡೀನ್ ಡಾ.ಸೌಮ್ಯಾ ಬಿ.ಪಿ. ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ. ಶಶಿಪ್ರಭಾ ವಂದಿಸಿದರು. ಪ್ರೊ.ನೆಫಿಸೆತ್ ಕಾರ್ಯಕ್ರಮ ನಿರೂಪಿಸಿದರು.

ಮೂರು ದಿನ ನಡೆಯುವ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅನುಭವ ಹಂಚಿಕೆ ಹಾಗೂ ಪರಸ್ಪರ ವಿಚಾರ ವಿನಿಮಯದೊಂದಿಗೆ ಚರ್ಚಿಸಿ, ಜಾಗತಿಕ ಮಟ್ಟದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಾಗಲಿ. ಈ ಮೂಲಕ ಆರೋಗ್ಯಪೂರ್ಣ ಸುಸ್ಥಿರ ಸಮಾಜ ನಿರ್ಮಾಣಗೊಳ್ಳಲಿ. ಪ್ರೊ.ಪಿ.ವಿಶ್ವನಾಥ ಪ್ರಾಂಶುಪಾಲ https://www.vijayavani.net/the-person-who-cheated-by-getting-gold-jewelery-was-arrested https://www.vijayavani.net/mp-capt-brijesh-chouta-2