ಬೆಳಗಾವಿ: ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ‘ಸ್ಕೇಟಿಂಗ್ ರಿಂಕ್’ ಸ್ಥಾಪಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಒತ್ತಾಯಿಸಿ ಬೆಳಗಾವಿಯ ರೋಲರ್ ಸ್ಕೇಟಿಂಗ್ ಅಕಾಡೆಮಿ ವತಿಯಿಂದ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಶನಿವಾರ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸ್ಕೇಟಿಂಗ್ ಮಾಡುವ ಮೂಲಕ ಪ್ರತಿಭಟಿಸಿದ ಸ್ಕೇಟಿಂಗ್‌ಪಟುಗಳು, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಸ್ಕೇಟಿಂಗ್‌ಪಟುಗಳಿಗಾಗಿ ಎಲ್ಲ ಸೌಲಭ್ಯಗಳುಳ್ಳ ಅಂತಾರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ರಿಂಕ್ ಸ್ಥಾಪಿಸಬೇಕು. ಅಲ್ಲದೆ, ಕರೊನಾ ಸಂಕಷ್ಟದಲ್ಲಿಯೂ ದೇಶ ಪ್ರತಿನಿಧಿಸಿ ಕ್ರೀಡಾಭಿಮಾನ ಮೆರೆಯುವ ಕ್ರೀಡಾಪಟುಗಳಿಗೆ ಮೊದಲ ಹಂತದಲ್ಲಿಯೇ ಕರೊನಾ ಲಸಿಕೆ ಉಚಿತವಾಗಿ ನೀಡಬೇಕು ಎಂದು ಮನವಿ ನೀಡಿದರು.
ಕ್ರೀಡಾ ಸೌಲಭ್ಯ ಒದಗಿಸಿ: ಜಿಲ್ಲಾದ್ಯಂತ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಸ್ಕೇಟಿಂಗ್ ಸ್ಪರ್ಧೆಗೆ ಹೆಚ್ಚಿನ ಪಟುಗಳು ಆಕರ್ಷಿತರಾಗುತ್ತಿದ್ದಾರೆ. ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸಿ, ಹಲವು ಬಹುಮಾನ ಮುಡಿಗೇರಿಸಿಕೊಂಡಿದ್ದಾರೆ. ಕ್ರೀಡಾ ಸೌಲಭ್ಯ ಹೆಚ್ಚಿಸಿದರೆ ಇನ್ನೂ ಹೆಚ್ಚಿನ ಸಾಧನೆ ಸಾಧ್ಯ. ಹೀಗಾಗಿ ಕ್ರೀಡಾ ಇಲಾಖೆ ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸ್ಕೇಟಿಂಗ್ ಪಟು ಸಕ್ಷಮ್ ಜಾಧವ್, ತರಬೇತುದಾರ ಸೂರ್ಯಕಾಂತ ಹಿಂಡಲಗೇಕರ್, ಪ್ರಥಮರಾಜ್, ಸದಾ ಶೇಖ್, ಯಶಪಾಲ್ ಪುರೋಹಿತ್, ಆದರ್ಶ ನಿಕ್ಕಂ, ಯಶವರ್ಧನ ಪರದೇಶಿ, ಅಮೇಯ ಯಾಳಗಿ, ಭರತ ಪಾಟೀಲ, ಚಿನ್ಮಯ ದೇಸಾಯಿ, ಸತ್ಯಂ ಪಾಟೀಲ ಇತರರಿದ್ದರು.