ಬೆಂಗಳೂರು: ಹೃದಯ ಮತ್ತು ಶ್ವಾಸಕೋಶ ಕಸಿ ಕುರಿತಾದ ಪ್ರಥಮ ಅಂತಾರಾಷ್ಟ್ರೀಯ ಸಮ್ಮೇಳನ ರಿವೈವ್ 2025ಯಶಸ್ವಿಯಾಗುವ ಮೂಲಕ ಕರ್ನಾಟಕದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. ವಾಯು ಚೆಸ್ಟ್ ಅಂಡ್ ಸ್ಲೀಪ್ ಸ್ಪೆಷಿಯಾಲಿಟಿಯ ಸಂಸ್ಥಾಪಕ ಡಾ. ರವೀಂದ್ರ ಮೆಹ್ತಾ ಮತ್ತು ಪುನರ್ವಸತಿ ಸೇವೆಯ ಮುಖ್ಯಸ್ಥ ಡಾ. ಯೋಗಿತಾ ಅವರ ಉಪಕ್ರಮದಲ್ಲಿ ನಡೆದ ಈ ಸಮ್ಮೇಳನವು, ದೀರ್ಘಕಾಲೀನ ಶ್ವಾಸಕೋಶ ಮತ್ತು ಹೃದಯ ರೋಗಗಳಿಗೆ ಸಮಗ್ರ ಚಿಕಿತ್ಸೆಯನ್ನು ಮುನ್ನಡೆಸುವ ದಿಶೆಯಲ್ಲಿ ಒಂದು ಹೆಜ್ಜೆಯಾಗಿದೆ. ವೈದ್ಯಕೀಯ, ಚಿಕಿತ್ಸಾ ಮತ್ತು ಕಸಿ ಕ್ಷೇತ್ರಗಳ ಬಹು-ವಿಭಾಗೀಯ ಸಹಯೋಗದ ಅಗತ್ಯ ಕುರಿತು ಸಮಾವೇಶದಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ರವೀಂದ್ರ ಮೆಹ್ತಾ, ಬಹು-ವಿಭಾಗೀಯ ತಂಡದ ಕೆಲಸವು ರೋಗಿಯ ಚೇತರಿಕೆ ಮತ್ತು ಸ್ವಾವಲಂಬನೆಯನ್ನು ಹೇಗೆ ಪುನರ್ ರಚಿಸಬಹುದು, ದೀರ್ಘಕಾಲೀನ ರೋಗ ನಿರ್ವಹಣೆ, ರಚನಾತ್ಮಕ ಮತ್ತು ರೋಗಿ-ಕೇಂದ್ರಿತ ವಿಷಯಗಳ ಕುರಿತು ಚರ್ಚಿಸಲು ರಿವೈವ್ ಸಮ್ಮೇಳನ ಪೂರಕ ವೇದಿಕೆ ಕಲ್ಪಿಸಿಕೊಟ್ಟಿತ್ತು ಎಂದರು. ಡಾ. ಕೆ.ಎಸ್. ಸತೀಶ್ ಸಮ್ಮೇಳನವನ್ನು ಉದ್ಘಾಟಿಸಿದರು. ದೆಹಲಿ ಮೆದಾಂತಾ ಹಾಸ್ಪಿಟಲ್ ಶಸ್ತ್ರಚಿಕಿತ್ಸಕ ಡಾ. ಅರವಿಂದ್ ಕುಮಾರ್ ಸಮ್ಮೇಳನದ ವೈಜ್ಞಾನಿಕ ಅಧಿವೇಶನಗಳ ಕುರಿತು ಮಾತನಾಡಿದರು. ಪ್ರಸಿದ್ಧ ಹೃದಯರೋಗ ತಜ್ಞ ಡಾ. ಬಿ.ಸಿ. ಶ್ರೀನಿವಾಸ್ ಮತ್ತು ಡಾ. ವೆಂಕಟೇಶ್ ಟಿ.ಕೆ. ಮತ್ತಿತರರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಸಮ್ಮೇಳನದ ಮುಂಜಾನೆಯ ಅಧಿವೇಶನವು ರೋಗ-ನಿರ್ದಿಷ್ಟ ಪುನರ್ವಸತಿ ನಿಬಂಧನೆಗಳನ್ನು ಕೇಂದ್ರೀಕರಿಸಿತ್ತು. ರೋಗಲಕ್ಷಣಗಳ ಆಧಾರಿತ ಚರ್ಚೆಗಳು ನಿಜಜೀವನದ ಕ್ಲಿನಿಕಲ್ ಸನ್ನಿವೇಶಗಳನ್ನು ತಂದು, ಶಿಕ್ಷಕವರ್ಗ ಮತ್ತು ಪ್ರತಿನಿಧಿಗಳನ್ನು ಸಂವಾದಾತ್ಮಕ ಸಮಸ್ಯೆ-ಪರಿಹಾರ ಚರ್ಚೆಯಲ್ಲಿ ತೊಡಗಿಸಿತ್ತು. ಮಧ್ಯಾಹ್ನದ ಅಧಿವೇಶನಗಳಲ್ಲಿ ಲೈವ್ ಕಾರ್ಯಾಗಾರಗಳನ್ನು ಏರ್ಪಡಿಸಲಾಗಿತ್ತು, ಯುಎಸ್‌ಎ ನಿಂದ ವರ್ಚುವಲ್ ಆಗಿ ಭಾಗವಹಿಸಿದ ಡಾ. ಗಣೇಶ್ ರಘು, ಡಾ. ಮೇರಿ ಬೆತ್ ಬ್ರೌನ್ ಮತ್ತು ಯೂಕೆನ ಡಾ. ಸ್ಯಾಲಿ ಸಿಂಗ್, ಬೆಲ್ಜಿಯಂನ ಡಾ. ರಿಕ್ ಗೋಸೆಲಿಂಕ್ ಮತ್ತಿತರ ಅಂತರರಾಷ್ಟ್ರೀಯ ತಜ್ಞರು ಪಾಲ್ಗೊಂಡಿದ್ದರು.
ವಾಯು ಚೆಸ್ಟ್ ಅಂಡ್ ಸ್ಲೀಪ್ ಸ್ಪೆಷಿಯಾಲಿಟಿ ಸೆಂಟರ್ ಶ್ವಾಸಕೋಶ ಮತ್ತು ನಿದ್ರಾ ದೋಷಗಳ ರೋಗನಿರ್ಣಯ ಮತ್ತು ಚಿಕಿತ್ಸೆಗೆ ಮೀಸಲಾಗಿರುವ ಒಂದು ಪ್ರಮುಖ ಕೇಂದ್ರವಾಗಿದೆ. ಆಧುನಿಕ ರೋಗನಿರ್ಣಯ ಪ್ರಯೋಗಾಲಯಗಳು, ಬಹು-ವಿಭಾಗೀಯ ಕ್ಲಿನಿಕ್‌ಗಳು, ಮತ್ತು ಸಂಶೋಧನೆ ಮತ್ತು ಶಿಕ್ಷಣಕ್ಕೆ ನೀಡುವ ಬದ್ಧತೆಯೊಂದಿಗೆ, ಶ್ವಾಸಕೋಶ ಆರೋಗ್ಯವನ್ನು ಕಾಪಾಡಲು ಸಂಸ್ಥೆಯು ನಿರಂತರ ಶ್ರಮಿಸುತ್ತಿದೆ.