ಜಿಲ್ಲೆ

ಪ್ರಜಾಪ್ರಭುತ್ವ ಬಲಗೊಳಿಸಲು ಭಾಗವಹಿಸಿ, ಡಿಸಿ ನಲಿನ್​ ಅತುಲ್​ ಮನವಿ

ಕೊಪ್ಪಳ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಸೆ.15ರಂದು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಬೃಹತ್​ ಮಾನವ ಸರಪಳಿ ರಚನೆಗೆ ಬೇಕಾದ ಸಿದ್ಧತೆ ಮಾಡಿಕೊಂಡಿದ್ದು, ಕಾರ್ಯಕ್ರಮ ಯಶಸ್ವಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಮನವಿ ಮಾಡಿದರು.

ರಾಜ್ಯದಲ್ಲಿ 2500 ಕಿ.ಮೀ. ಉದ್ದದ ಮಾನವ ಸರಪಳಿ ರಚಿಸಲಾಗುತ್ತಿದೆ. ಬೀದರ್​ ಜಿಲ್ಲೆಯಿಂದ ಚಾಮರಾಜ ನಗರ ಜಿಲ್ಲೆವರೆಗೆ ಏಕಕಾಲಕ್ಕೆ ಮಾನವ ಸರಪಳಿ ರಚಿಸುವ ಗುರಿ ಹೊಂದಲಾಗಿದೆ. ನಮ್ಮ ಜಿಲ್ಲೆಯಲ್ಲಿ ಬೆಳಗಟ್ಟಿ ಗ್ರಾಮದಿಂದ ಮುನಿರಾಬಾದ್​ ಗ್ರಾಮ ಅಂತ್ಯದವರೆಗೆ 55 ಕಿ.ಮೀ. ಮಾನವ ಸರಪಳಿ ರಚಿಸಲಾಗುವುದು. ಬೆಳಗಟ್ಟಿ&ಹಿರೇ ಸಿಂದೋಗಿ&ಚಿಕ್ಕ ಸಿಂದೋಗಿ& ಕೊಪ್ಪಳ&ಗಿಣಿಗೇರಾ&ಮುನಿರಾಬಾದ್​ ಮಾರ್ಗವಾಗಿ ಇರಲಿದೆ. ಬೆಳಗ್ಗೆ 9.30ರಿಂದ 10 ಗಂಟೆಯೊಳಗೆ ಕಾರ್ಯಕ್ರಮ ಮುಗಿಯಲಿದೆ. ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರತಿ ನೂರು ಮೀಟರ್​ಗೆ, 500 ಮೀಟರ್​, 1 ಕಿ.ಮೀ.ಗೆ ಒಬ್ಬರಂತೆ 550 ನೋಡಲ್​ ಅಧಿಕಾರಿಗಳನ್ನು ನೇಮಿಸಲಾಗಿದೆ. ಶಾಲಾ&ಕಾಲೇಜು, ಸಂ&ಸಂಸ್ಥೆ, ವಿವಿಧ ಯೋಜನೆಗಳ ಲಾನುಭವಿಗಳು, ನಗರ, ಸ್ಥಳಿಯ ಜನಪ್ರತಿನಿಧಿಗಳು, ಸಾರ್ವಜನಿಕರು ಭಾಗಿಯಾಗುವಂತೆ ಮನವಿ ಮಾಡಿದ್ದೇವೆ. 1 ಕಿ.ಮೀ.ಗೆ ಒಂದು ಸಾವಿರದಂತೆ 55 ಸಾವಿರ ಜನರು ಬೇಕಾಗಲಿದೆ. ನಾವು 1 ಲಕ್ಷ ಜನರನ್ನು ಸೇರಿಸಲು ತಯಾರಿ ಮಾಡಿಕೊಂಡಿದ್ದೇವೆ. ಸರಪಳಿ ಸಾಗುವ ಮಾರ್ಗದ ಗ್ರಾಪಂ, ನಗರ, ಸ್ಥಳಿಯ ಸಂಸ್ಥೆಗಳಿಗೆ ಸೂಚಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಲಾಗುತ್ತಿದೆ.

ಆಯಾ ಶಾಲಾ&ಕಾಲೇಜು ಮುಂಭಾಗದಲ್ಲಿ ವಿದ್ಯಾರ್ಥಿಗಳನ್ನು ನಿಲ್ಲಿಸುವಂತೆ ತಿಳಿಸಲಾಗಿದೆ. ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ತಮ್ಮ ಮಠದ ಮಕ್ಕಳನ್ನು ಕಳಿಸುವುದಾಗಿ ಭರವಸೆ ನೀಡಿದ್ದಾರೆ. ಕೊಪ್ಪಳ ನಗರದಲ್ಲೇ 10 ಸಾವಿರ ಜನರು ಸೇರುವ ನಿರೀೆ ಇದೆ. ಎಲ್ಲರಿಗೂ ಕುಡಿವ ನೀರು, ಅಲ್ಪ ಉಪಾಹಾರದ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಕೊಪ್ಪಳದ ಅಶೋಕ ವೃತ್ತದಲ್ಲಿ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ಇರಲಿದೆ. ಜಿಲ್ಲೆಯಲ್ಲ ಎಲ್ಲ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆಂದು ವಿವರಿಸಿದರು. ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜು ತಳವಾರ ಇದ್ದರು.

ಟಿಬಿ ಡ್ಯಾಂನಲ್ಲಿ ವಿಶೇಷ ಆಚರಣೆ
ಮುನಿರಾಬಾದ್​ ತುಂಗಭದ್ರಾ ಜಲಾಶಯ ರಾಷ್ಟ್ರದ ಗಮನ ಸೆಳೆದಿದೆ. ರಾಜ್ಯ ಸರ್ಕಾರದ ಸೂಚನೆಯಂತೆ ಮಾನವ ಸರಪಳಿ ರಚಿಸುವುದರೊಂದಿಗೆ ಡ್ಯಾಂನಲ್ಲಿ ಪ್ರತ್ಯೇಕ ಮಾನವ ಸರಪಳಿ ರಚಿಸಲು ಯೋಜಿಸಿದ್ದೇವೆ. ಮುನಿರಾಬಾದ್​ನಿಂದ ಟಿಬಿ ಡ್ಯಾಂ ಎಡ ಮತ್ತು ಬಲ ತುದಿವರೆಗೆ 2 ಕಿ.ಮೀ. ವಿಶೇಷ ಸರಪಳಿ ರಚಿಸಲಾಗುವುದು. ಈ ಪ್ರದೇಶ ಸಾರ್ವಜನಿಕರಿಗೆ ನಿಷೇಧವಿದೆ. ಹೀಗಾಗಿ ಟಿಬಿ ಬೋರ್ಡ್​, ನೀರಾವರಿ ನಿಗಮದ ಅಧಿಕಾರಿಗಳು ಮಾತ್ರ ಸರಪಳಿಯಲ್ಲಿ ಇರಲಿದ್ದಾರೆಂದು ಡಿಸಿ ತಿಳಿಸಿದರು.