ಅವಿನಾಶ್ ಜೈನಹಳ್ಳಿ ಮೈಸೂರು
ಮೈಸೂರಿನ ಕ್ರಿಕೆಟ್ ಪ್ರೇಮಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ…!
ಎಲ್ಲವೂ ಅಂದುಕೊಂಡಂತೆ ನಡೆದರೆ, 2024ನೇ ಸಾಲಿನ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಗಳನ್ನು ನಗರದಲ್ಲಿಯೇ ಕಣ್ತುಂಬಿಕೊಳ್ಳುವ ಸೌಭಾಗ್ಯ ನಿಮ್ಮದಾಗಲಿದೆ. ಮೈಸೂರಿನಲ್ಲಿ ಅಂತಾರಾಷ್ಟೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಿಸುವ ಯೋಜನೆ ಮತ್ತೆ ಮುನ್ನಲೆಗೆ ಬಂದಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಸಂಭ್ರಮ ಹೆಚ್ಚುವಂತೆ ಮಾಡಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯು ಬೆಂಗಳೂರಿನ ಹೊರಭಾಗಕ್ಕೂ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳನ್ನು ಕೊಂಡೊಯ್ಯಬೇಕೆಂದು ನಿರ್ಧರಿಸಿದೆ. ಅದರಂತೆ, ರಾಜ್ಯದ ಎರಡನೇ ಅತಿ ದೊಡ್ಡ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಸಾಂಸ್ಕೃತಿಕ ನಗರಿ’ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಿಸಲು ಕಳೆದ 6 ವರ್ಷಗಳಿಂದ ಪ್ರಯತ್ನಿಸುತ್ತಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮಾಲೀಕತ್ವದ ತಾಲೂಕಿನ ಸಾತಗಳ್ಳಿ ಗ್ರಾಮ ವ್ಯಾಪ್ತಿಯ 19-20 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಭೂಮಿಯನ್ನು ಕೆಎಸ್‌ಸಿಎಗೆ ನೀಡುವ ಸಂಬಂಧ ಶೀಘ್ರದಲ್ಲೇ ಕ್ಯಾಬಿನೆಟ್ ಒಪ್ಪಗೆ ಸಿಗುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಕೆಎಸ್‌ಸಿಎ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದ್ದರು. ‘ಮೈಸೂರು ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಾಣ ಮಾಡುಲು ಕೆಎಸ್‌ಸಿಎ ಉದ್ದೇಶಿಸಿದ್ದು, ಕ್ರಿಕೆಟ್ ಉತ್ತೇಜಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕೆಲಸ ಅವಶ್ಯವಾಗಿರುತ್ತದೆ. ಇದಕ್ಕೆ ಅನುಗುಣವಾಗಿ ಕೆಎಸ್‌ಸಿಎಯಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಪ್ರಾಧಿಕಾರ ವ್ಯಾಪ್ತಿಯ ಹಂಚ್ಯಾ ಸಾತಗಳ್ಳಿ ಬಿ. ಬಡಾವಣೆಯಲ್ಲಿ ಬಯಲು ಪ್ರದೇಶ ಮತ್ತು ಉದ್ಯಾನವನ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿರುವ 19-20 ಎಕರೆ ಜಾಗವನ್ನು ಗುರುತುಪಡಿಸಿ, ಮಂಜೂರು ಮಾಡುವಂತೆ ಮುಡಾದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಜತೆಗೆ, ಸದರಿ ಜಾಗಕ್ಕೆ ಹತ್ತಿರದಲ್ಲಿರುವ 16000 ಚ.ಮೀ. ಅಳತೆಯ ಸಿ.ಎ. ನಿವೇಶನವನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡಲು ಕರ್ನಾಟಕ ರಾಜ್ಯ
ಕ್ರಿಕೆಟ್ ಸಂಸ್ಥೆಗೆ ತುರ್ತಾಗಿ ಮಂಜೂರು ಮಾಡಿಕೊಡಬೇಕು’ ಎಂಬ ಮನವಿ ಸಲ್ಲಿಸಲಾಗಿತ್ತು.
ಮನವಿಯನ್ನು ಆಲಿಸಿದ್ದ ಸಿಎಂ, ಈ ವಿಷಯವನ್ನು ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಬಳಿಕ ಒಪ್ಪಿಗೆ ನೀಡಲಾಗುವುದೆಂದು ಆಶ್ವಾಸನೆ ನೀಡಿದ್ದರು. ಅದರಂತೆ, ಒಂದು ವಾರದಲ್ಲಿ ಕ್ಯಾಬಿನೆಟ್ ಒಪ್ಪಿಗೆ ಸಿಗುವ ಸಾಧ್ಯತೆ ಇದ್ದು, ಎಲ್ಲ ಅಂದುಕೊಂಡಂತೆ ನಡೆದರೆ ಒಂದು ವರ್ಷದಲ್ಲಿ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಸಿದ್ಧವಾಗಲಿದೆ.
50 ಕೋಟಿ ರೂ. ವ್ಯಚ್ಚದಲ್ಲಿ ನಿರ್ಮಾಣ:
ಜಮೀನು ನೀಡಲು ಸರ್ಕಾರ ಒಪ್ಪಿಗೆ ನೀಡಿದ ಒಂದು ವಾರದ ಒಳಗೆ ಮೈದಾನ ನಿರ್ಮಾಣದ ಭೂಮಿಪೂಜೆ ಮಾಡಲಾಗುತ್ತದೆ.
ಇದಕ್ಕಾಗಿ 40 ರಿಂದ 50 ಕೋಟಿ ರೂ. ವ್ಯಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. 30 ರಿಂದ 40 ಸಾವಿರ ಪ್ರೇಕ್ಷಕರು ಕುಳಿತು ಕ್ರಿಕೆಟ್ ವೀಕ್ಷಿಸಲು ಆಸನಗಳ ವ್ಯವಸ್ಥೆ, ವಿಶಾಲ ಕ್ರೀಡಾಂಗಣ, ತರಬೇತಿ ಮೈದಾನ ಸೇರಿದಂತೆ ಕ್ರೀಡಾಂಗಣಕ್ಕೆ ಬೇಕಾದ ಮೂಲ ಸೌಕರ್ಯಗಳೊಂದಿಗೆ ಯೋಜನೆ ಜಾರಿಗೊಳಿಸಲು ಕೆಎಸ್‌ಸಿಎ ಸಿದ್ಧಗೊಂಡಿದೆ. ಹಂತ-ಹಂತವಾಗಿ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ ಎಂದು ಕೆಎಸ್‌ಸಿಎ ಮೈಸೂರು ವಲಯ ಸಂಚಾಲಕ ಎಸ್.ಸುಧಾಕರ್ ರೈ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಮಹಾರಾಜ ಟ್ರೋಫಿ ಪಂದ್ಯಾವಳಿಯ ಸಂದರ್ಭದಲ್ಲಿ ಈ ಬಗ್ಗೆ ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಅವರು ಸಂಸದ ಪ್ರತಾಪ್ ಸಿಂಹ ಅವರ ಬಳಿ ಚರ್ಚೆ ನಡೆಸಿದ್ದರು. ಆ ವೇಳೆ ಸಂಸದರು ಸರ್ಕಾರದಿಂದ ಭೂಮಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ, ಮುಖ್ಯಮಂತ್ರಿ ಮೈಸೂರಿಗೆ ಬಂದಾಗ ಈ ಬಗ್ಗೆ ಚರ್ಚೆ ನಡೆಸಿ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಅವರೂ ಭೂ ನೀಡುವುದಾಗಿ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.
ಕೆಎಸ್‌ಸಿಎ ವ್ಯಾಪ್ತಿಯಲ್ಲಿ 2 ಮೈದಾನ:
ಕೆಎಸ್‌ಸಿಎ ನಗರದಲ್ಲಿ ಈಗಾಗಲೇ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(ಗ್ಲೇಡ್ಸ್) ಮೈದಾನ ಹಾಗೂ ಜೆಸಿ ಕಾಲೇಜು ಆವರಣದ ಮೈದಾನಗಳನ್ನು ಅಭಿವೃದ್ಧಿಪಡಿಸಿದೆ.
ಗ್ಲೇಡ್ಸ್ ಮೈದಾನದಲ್ಲಿ 2006ರಿಂದಲೂ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಾವಳಿಗಳಿಗೆ ಆತಿಥ್ಯ ನೀಡುತ್ತಿದೆ. 2010ರಲ್ಲಿ ನಡೆದ ಕರ್ನಾಟಕ ಮತ್ತು ಮುಂಬೈ ನಡುವಿನ ಫೈನಲ್ ರಣಜಿ ಸೇರಿದಂತೆ ಒಟ್ಟು 15 ರಣಜಿ ಪಂದ್ಯಗಳಿಗೆ ಆತಿಥ್ಯ ವಹಿಸಿದೆ. 2013ರಲ್ಲಿ ಭಾರತ ‘ಎ’ ಮತ್ತು ವಿಂಡೀಸ್ ‘ಎ’ ತಂಡಗಳ ನಡುವಿನ ಪಂದ್ಯ ಹಾಗೂ 2014ರ ನವೆಂಬರ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ ಅಂತಾರಾಷ್ಟ್ರೀಯ ಮಟ್ಟದ ಟೆಸ್ಟ್ ಪಂದ್ಯಕ್ಕೂ ಸಾಕ್ಷಿಯಾಗಿ ಅಂತಾರಾಷ್ಟ್ರೀಯ ಮಾನ್ಯತೆ ಗಳಿಸಿದ್ದು ವಿಶೇಷವಾಗಿತ್ತು. ಇನ್ನು ಕೆಪಿಎಲ್ ಹಾಗೂ ಮಹಾರಾಜ ಟ್ರೋಫಿ ಪಂದ್ಯಾವಳಿಯ ಒಟ್ಟು 80ಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಜೆಸಿ ಕಾಲೇಜು ಆವರಣದ ಮೈದಾನದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಗಳು ನಡೆಯುತ್ತಿವೆ. ಇದೀಗ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಾಣದ ಕನಸು ನನಸಾಗುವ ಸಮಯ ಬಂದಿದೆ.
ಡೆಬ್ರಿಸ್ ವಿಲೇವಾರಿಗೆ ಬಳಕೆಯಾಗಿತ್ತು!
ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಿಸಲು ನಿರ್ಧರಿಸಿರುವ ಜಾಗವನ್ನು ಜಿಲ್ಲಾಡಳಿತ ವರ್ಷದ ಹಿಂದೆ ಡೆಬ್ರಿಸ್ ವಿಲೇವಾರಿಗೆ ಬಳಸಿಕೊಂಡಿತ್ತು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದರಿ ಜಾಗವನ್ನು ಕಟ್ಟಡ ತ್ಯಾಜ್ಯ ಸುರಿಯುವ ಘಟಕಕ್ಕಾಗಿ ನಗರ ಪಾಲಿಕೆಗೆ ಹಸ್ತಾಂತರಿಸಿದ್ದು, ಕ್ರಿಕೆಟ್ ಪ್ರೇಮಿಗಳು ಹಾಗೂ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಸಾತಗಳ್ಳಿ ಬಳಿ 19-20 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಿಸಲು ಕೆಎಸ್‌ಸಿಇ ಉದ್ದೇಶಿಸಿದೆ. ಈ ಸಂಬಂಧ ಸಂಸದ ಪ್ರತಾಪ್ ಸಿಂಹ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರ ಜತೆ ಮಾತುಕತೆ ನಡೆದಿದೆ. ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ.ಎಸ್.ಸುಧಾಕರ್ ರೈ, ಕೆಎಸ್‌ಸಿಎ ಮೈಸೂರು ವಲಯ ಸಂಚಾಲಕಮೈಸೂರಿನಲ್ಲೂ ಪ್ರತಿಭಾನ್ವಿತ ಕ್ರಿಕೆಟ್ ಪಟುಗಳಿದ್ದಾರೆ. ಆದರೆ ಅಂತಾರಾಷ್ಟ್ರೀಯ ಮಟ್ಟದ ಮೈದಾನ ಇಲ್ಲದ ಕಾರಣ ತಮ್ಮ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರುವಲ್ಲಿ ಸೋತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿ ನೀಡುವುದು ಒಳ್ಳೆಯದು.ಭರತ್, ಕ್ರಿಕೆಟ್ ಹಿರಿಯ ಆಟಗಾರ