ಜಿಲ್ಲೆ

ಮೈಸೂರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ!

ಅವಿನಾಶ್ ಜೈನಹಳ್ಳಿ

ಅವಿನಾಶ್ ಜೈನಹಳ್ಳಿ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಿಸಬೇಕೆಂಬ ಕ್ರಿಕೆಟ್ ಪ್ರೇಮಿಗಳ ಬಹುದಿನದ ಕನಸು ನನಸಾಗುವ ಸಮಯ ಬಂದಿದೆ. ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಪ್ರಕ್ರಿಯೆಗೆ ವೇಗ ನೀಡಬೇಕಿದೆ.

ರಾಜಧಾನಿ ಬೆಂಗಳೂರಿನ ಹೊರ ಭಾಗಕ್ಕೂ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳನ್ನು ಕೊಂಡೊಯ್ಯಬೇಕೆಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ನಿರ್ಧರಿಸಿದೆ. ಅದರಂತೆ, ರಾಜ್ಯದ ಎರಡನೇ ಅತಿ ದೊಡ್ಡ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಸಾಂಸ್ಕೃತಿಕ ನಗರಿ’ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಿಸಲು 7 ವರ್ಷಗಳಿಂದ ಪ್ರಯತ್ನಿಸುತ್ತಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಲೀಕತ್ವದಲ್ಲಿರುವ ತಾಲೂಕಿನ ಸಾತಗಳ್ಳಿ ಗ್ರಾಮ ವ್ಯಾಪ್ತಿಯ 19-20 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಿಸಲು ಉದ್ದೇಶಿಸಲಾಗಿದೆ. ಆದರೆ, ಈ ಭೂಮಿಯನ್ನು ಕೆಎಸ್‌ಸಿಎಗೆ ನೀಡುವ ಸಂಬಂಧ ಕ್ಯಾಬಿನೆಟ್ ಒಪ್ಪಿಗೆಗಾಗಿ ಕಾಯಲಾಗುತ್ತಿದೆ.

ಕ್ಯಾಬಿನೆಟ್ ಒಪ್ಪಿಗೆ ಸಿಗಬೇಕಿದೆ

ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಸರಾ ಮಹೋತ್ಸವ-2022ರಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಕೆಎಸ್‌ಸಿಎ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದ್ದರು.
ಮೈಸೂರು ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಾಣ ಮಾಡಲು ಕೆಎಸ್‌ಸಿಎ ಉದ್ದೇಶಿಸಿದ್ದು, ಕ್ರಿಕೆಟ್ ಉತ್ತೇಜಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕೆಲಸ ಅವಶ್ಯವಾಗಿರುತ್ತದೆ. ಇದಕ್ಕೆ ಅನುಗುಣವಾಗಿ ಕೆಎಸ್‌ಸಿಎಯಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಪ್ರಾಧಿಕಾರ ವ್ಯಾಪ್ತಿಯ ಹಂಚ್ಯಾ ಸಾತಗಳ್ಳಿ ಬಿ.ಬಡಾವಣೆಯಲ್ಲಿ ಬಯಲು ಪ್ರದೇಶ ಮತ್ತು ಉದ್ಯಾನ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿರುವ 19-20 ಎಕರೆ ಜಾಗವನ್ನು ಗುರುತುಪಡಿಸಿ, ಮಂಜೂರು ಮಾಡುವಂತೆ ಮುಡಾದಿಂದಲೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬುದನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿತ್ತು. ಮನವಿಯನ್ನು ಆಲಿಸಿದ್ದ ಬಸವರಾಜ ಬೊಮ್ಮಾಯಿ, ಈ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಬಳಿಕ ಒಪ್ಪಿಗೆ ನೀಡಲಾಗುವುದೆಂದು ಆಶ್ವಾಸನೆ ನೀಡಿದ್ದರು. ಆದರೆ, ಸದರಿ ವಿಷಯ ಕ್ಯಾಬಿನೆಟ್ ಮಟ್ಟಕ್ಕೆ ಹೋಗುವ ಒಳಗೆ ಚುನಾವಣೆ ಎದುರಾಯಿತು. ಜತೆಗೆ ಸರ್ಕಾರವೂ ಬದಲಾಗಿದೆ.
ಸದ್ಯ ಮೈಸೂರು ಜಿಲ್ಲೆಯವರೇ ಮುಖ್ಯಮಂತ್ರಿಯಾಗಿದ್ದಾರೆ. ಇವರ ಅವಧಿಯಲ್ಲಾದರೂ ಭೂಮಿಯನ್ನು ಕೆಎಸ್‌ಸಿಎಗೆ ನೀಡುವ ಸಂಬಂಧ ಕ್ಯಾಬಿನೆಟ್ ಒಪ್ಪಿಗೆ ದೊರೆತು, ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣವಾಗಲಿ. 2025ನೇ ಸಾಲಿನ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಗಳನ್ನು ನಗರದಲ್ಲಿಯೇ ಕಣ್ತುಂಬಿಕೊಳ್ಳುವ ಸೌಭಾಗ್ಯವೂ ದೊರೆಯಲಿ ಎನ್ನುವುದು ಸಾಂಸ್ಕೃತಿಕ ನಗರಿಯ ಕ್ರಿಕೆಟ್ ಪ್ರೇಮಿಗಳ ಪ್ರಾರ್ಥನೆಯಾಗಿದೆ.

50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ

ಜಮೀನು ನೀಡಲು ಸರ್ಕಾರ ಒಪ್ಪಿಗೆ ನೀಡಿದ ಒಂದು ವಾರದ ಒಳಗೆ ಮೈದಾನ ನಿರ್ಮಾಣದ ಭೂಮಿಪೂಜೆ ಮಾಡಲು ಕೆಎಸ್‌ಸಿಎ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ 40 ರಿಂದ 50 ಕೋಟಿ ರೂ. ವ್ಯಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. 30 ರಿಂದ 40 ಸಾವಿರ ಪ್ರೇಕ್ಷಕರು ಕುಳಿತು ಕ್ರಿಕೆಟ್ ವೀಕ್ಷಿಸಲು ಆಸನಗಳ ವ್ಯವಸ್ಥೆ, ವಿಶಾಲ ಕ್ರೀಡಾಂಗಣ, ತರಬೇತಿ ಮೈದಾನ ಸೇರಿದಂತೆ ಕ್ರೀಡಾಂಗಣಕ್ಕೆ ಬೇಕಾದ ಮೂಲ ಸೌಕರ್ಯಗಳೊಂದಿಗೆ ಯೋಜನೆ ಜಾರಿಗೊಳಿಸಲು ಕೆಎಸ್‌ಸಿಎ ಸಿದ್ಧಗೊಂಡಿದೆ.

ಕೆಎಸ್‌ಸಿಎ ವ್ಯಾಪ್ತಿಯಲ್ಲಿ 2 ಮೈದಾನ

ಕೆಎಸ್‌ಸಿಎ ನಗರದಲ್ಲಿ ಈಗಾಗಲೇ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(ಗ್ಲೇಡ್ಸ್) ಮೈದಾನ ಹಾಗೂ ಜೆಸಿ ಕಾಲೇಜು ಆವರಣದ ಮೈದಾನಗಳನ್ನು ಅಭಿವೃದ್ಧಿಪಡಿಸಿದೆ.
ಗ್ಲೇಡ್ಸ್ ಮೈದಾನದಲ್ಲಿ 2006ರಿಂದಲೂ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಾವಳಿಗಳಿಗೆ ಆತಿಥ್ಯ ನೀಡಲಾಗುತ್ತಿದೆ. 2010ರಲ್ಲಿ ನಡೆದ ಕರ್ನಾಟಕ ಮತ್ತು ಮುಂಬೈ ನಡುವಿನ ಫೈನಲ್ ರಣಜಿ ಸೇರಿದಂತೆ ಒಟ್ಟು 15 ರಣಜಿ ಪಂದ್ಯಗಳಿಗೆ ಆತಿಥ್ಯ ವಹಿಸಿದೆ. 2013ರಲ್ಲಿ ಭಾರತ ‘ಎ’ ಮತ್ತು ವಿಂಡೀಸ್ ‘ಎ’ ತಂಡಗಳ ನಡುವಿನ ಪಂದ್ಯ ಹಾಗೂ 2014ರ ನವೆಂಬರ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ ಅಂತಾರಾಷ್ಟ್ರೀಯ ಮಟ್ಟದ ಟೆಸ್ಟ್ ಪಂದ್ಯಕ್ಕೂ ಸಾಕ್ಷಿಯಾಗಿ ಅಂತಾರಾಷ್ಟ್ರೀಯ ಮಾನ್ಯತೆ ಗಳಿಸಿದ್ದು ವಿಶೇಷವಾಗಿತ್ತು. ಇನ್ನು ಕೆಪಿಎಲ್ ಹಾಗೂ ಮಹಾರಾಜ ಟ್ರೋಫಿ ಪಂದ್ಯಾವಳಿಯ ಒಟ್ಟು 80ಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಜೆಸಿ ಕಾಲೇಜು ಆವರಣದ ಮೈದಾನದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಗಳು ನಡೆಯುತ್ತಿವೆ. ಇದೀಗ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಾಣದ ಕನಸು ನನಸಾಗುವ ಸಮಯ ಬಂದಿದೆ.

ಡೆಬ್ರಿಸ್ ವಿಲೇವಾರಿಗೆ ಬಳಕೆಯಾಗಿತ್ತು!

ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಿಸಲು ನಿರ್ಧರಿಸಿರುವ ಜಾಗವನ್ನು ಜಿಲ್ಲಾಡಳಿತ ಎರಡು ವರ್ಷದ ಹಿಂದೆ ಡೆಬ್ರಿಸ್ ವಿಲೇವಾರಿಗೆ ಬಳಸಿಕೊಂಡಿತ್ತು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದರಿ ಜಾಗವನ್ನು ಕಟ್ಟಡ ತ್ಯಾಜ್ಯ ಸುರಿಯುವ ಘಟಕಕ್ಕಾಗಿ ನಗರ ಪಾಲಿಕೆಗೆ ಹಸ್ತಾಂತರಿಸಿದ್ದು, ಕ್ರಿಕೆಟ್ ಪ್ರೇಮಿಗಳು ಹಾಗೂ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ವತಿಯಿಂದ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಮೈದಾನಕ್ಕೆ ಭೂಮಿ ನೀಡುವ ಪ್ರಕ್ರಿಯೆ ಸರ್ಕಾರ ಮಟ್ಟದಲ್ಲಿ ಇದ್ದು, ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ನಂಬಿಕೆ ಇದೆ.ಬಾಲಚಂದರ್ಅಧ್ಯಕ್ಷರು, ಕೆಎಸ್‌ಸಿಎ ಮೈಸೂರು ವಲಯ
ಮೈಸೂರಿನಲ್ಲೂ ಪ್ರತಿಭಾನ್ವಿತ ಕ್ರಿಕೆಟ್ ಪಟುಗಳಿದ್ದಾರೆ. ಆದರೆ ಅಂತಾರಾಷ್ಟ್ರೀಯ ಮಟ್ಟದ ಮೈದಾನ ಇಲ್ಲದ ಕಾರಣ ತಮ್ಮ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರುವಲ್ಲಿ ಸೋತಿದ್ದಾರೆ. ನಮ್ಮ ಜಿಲ್ಲೆಯವರೇ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ. ಸಿದ್ದರಾಮಯ್ಯ ಅವರು ಕೂಡ ಕ್ರಿಕೆಟ್ ಅಭಿಮಾನಿಯಾಗಿದ್ದಾರೆ. ಈ ಬಾರಿ ಅವರು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಸಹಕಾರ ನೀಡುತ್ತಾರೆ ಎಂಬ ಭಾವನೆ ನನ್ನದು.-ಸಂದೀಪ್, ಕ್ರಿಕೆಟ್ ಪ್ರೇಮಿ