ಮಂಗಳೂರು: ಸುಸ್ಥಿರ ಮೂಲಸೌಕರ್ಯಗಳ ಸ್ಥಾಪನೆ ಹಾಗೂ ಬೆಳವಣಿಗೆಯ ಮೇಲೆ ರಾಷ್ಟ್ರದ ಅಭಿವೃದ್ಧಿಯ ಗಮನಾರ್ಹ ಅವಲಂಬನೆ ಸಾಧ್ಯ ಎಂದು ಎಂದು ನವದೆಹಲಿಯ ಎಐಸಿಟಿಇ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ಹೇಳಿದರು.
ಸುರತ್ಕಲ್ ಎನ್‌ಐಟಿಕೆಯಲ್ಲಿ ಸುಸ್ಥಿರ ಮೂಲಸೌಕರ್ಯದ ನಾವೀನ್ಯತೆಗಳು, ಅವಕಾಶಗಳು ಮತ್ತು ಸವಾಲುಗಳ ಕುರಿತು ನಡೆದ ಅಂತರರಾಷ್ಟ್ರೀ ಸಮ್ಮೇಳನದಲ್ಲಿ ಮಾತನಾಡಿದರು.
2047ರ ಮೊದಲು ಭಾರತವು ಅಮೃತ ಕಾಲ, ವಿಕ್ಷಿತ್ ಭಾರತ್ ಸ್ಥಾನಮಾನವನ್ನು ಸಾಧಿಸುವ ಭಾರತ ಯಶಸ್ವಿಯಾಗಲಿದೆ. ಸುಸ್ಥಿರ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ಸಲ್ಲಿಸಬೇಕು. ನವೀನ ಮತ್ತು ಸುಸ್ಥಿರ ಪರಿಹಾರ, ಸುಸ್ಥಿರ ಅಭಿವೃದ್ಧಿ ಗುರಿ, ಮಾರ್ಗೋಪಾಯಗಳ ಬಗ್ಗೆ ಎಲ್ಲರ ಕೊಡುಗೆ ಅಗತ್ಯ. ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳ ಹೆಚ್ಚಳದ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಬಹುದು ಎಂದರು.
ಎನ್‌ಐಟಿಕೆ ಸಿವಿಲ್ ವಿಭಾಗದ ಮುಖ್ಯಸ್ಥ ಪ್ರೊ.ಸುಭಾಷ್ ಸಿ.ಯರಗಲ್ ಅಧ್ಯಕ್ಷತೆ ವಹಿಸಿದ್ದರು.
ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದ (ಎನ್‌ಯುಎಸ್) ಸಹಾಯಕ ಪ್ರಾಧ್ಯಾಪಕ ಪ್ರೊ.ಡರೆನ್ ಚೈನ್ ಸಿಯಾವ್ ಚೆನ್, ಎನ್‌ಐಟಿಕೆ ನಿರ್ದೇಶಕ ಪ್ರೊ.ಬಿ.ರವಿ, ಇಂಜಿನಿಯರಿಂಗ್ ವಿಭಾಗದ ಡಾ.ರವಿರಾಜ್ ಎಚ್.ಎಂ., ಡಾ.ಶ್ರೀವಲ್ಸ ಕೊಳತ್ತಾಯರ್ ಮತ್ತು ಡಾ.ಪವನ್ ಇದ್ದರು.
ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ಎನ್ ಐಟಿಕೆ ಸುರತ್ಕಲ್‌ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಕಟ್ಟಾ ವೆಂಕಟರಮಣ ಅವರನ್ನು ಸನ್ಮಾನಿಸಿದರು.
ಅಂತರರಾಷ್ಟ್ರೀಯ ಪ್ರಬಂಧ ಮಂಡನೆ
ಸುಸ್ಥಿರ ಮೂಲಸೌಕರ್ಯ ಕುರಿತ ಅಂತರರಾಷ್ಟ್ರೀ ಸಮ್ಮೇಳನದಲ್ಲಿ ದೇಶ, ವಿದೇಶಗಳಿಂದ 300 ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಹೈಬ್ರಿಡ್ ಮೋಡ್‌ನಲ್ಲಿ ಪ್ರಬಂಧ ಪ್ರಸ್ತುತಪಡಿಸಿದರು. ನೀತಿ ನಿರೂಪಕರು, ಆಡಳಿತಗಾರರು, ವೃತ್ತಿನಿರತರು, ಕೈಗಾರಿಕೋದ್ಯಮಿಗಳು, ವಿಜ್ಞಾನಿಗಳು, ಸಂಶೋಧಕರು, ಶಿಕ್ಷಣ ತಜ್ಞರು ಮತ್ತು ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು. ಭೂಕಂಪನ ಸ್ಥಿತಿಸ್ಥಾಪಕ ಮೂಲಸೌಕರ್ಯ, ಹವಾಮಾನ ಕ್ರಿಯೆ, ಸಂಯೋಜಿತ ರಚನೆಯಲ್ಲಿನ ಆವಿಷ್ಕಾರಗಳು, ಕಡಿಮೆ ಇಂಗಾಲದ ಕಟ್ಟಡ ತಂತ್ರಜ್ಞಾನಗಳು, ವಸತಿ ನಿರ್ಮಾಣಗಳಿಗೆ ಕೈಗಾರಿಕಾ ತ್ಯಾಜ್ಯಗಳ ಬಳಕೆ, ಹಸಿರು ಹೆದ್ದಾರಿಗಳ ವಿನ್ಯಾಸ ಮತ್ತು ನಿರ್ಮಾಣಗಳು, ನಗರ ಸಾರಿಗೆ ಮತ್ತು ಸಂಚಾರ ನಿರ್ವಹಣೆ, ಮಣ್ಣಿನ ಸುಧಾರಣೆ ಮತ್ತು ನೆಲದ ಸ್ಥಿರೀಕರಣ, ಘನ ತ್ಯಾಜ್ಯ ನಿರ್ವಹಣೆ ವಿಷಯಗಳ ಬಗ್ಗೆ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಚರ್ಚಿಸಲಾಯಿತು.