ಹುಬ್ಬಳ್ಳಿ: ಒಂದು ಸಂಶೋಧನೆ ಅಥವಾ ಪ್ರಬಂಧ ವಿಫಲವಾದರೆ ಅದನ್ನು ಸೋಲು ಎಂದು ಪರಿಗಣಿಸಬಾರದು. ಬದಲಾಗಿ ಅದರಿಂದ ಕಲಿತ ಪಾಠವನ್ನು ಮುಂದಿನ ಆವಿಷ್ಕಾರಕ್ಕೆ ಮೆಟ್ಟಿಲಾಗಿ ಪರಿವರ್ತಿಸಿಕೊಳ್ಳಬೇಕೆ ಹೊರತು ಮುಂದಿನದೂ ಹೀಗೇ ಎಂದು ಪೂರ್ವಾಗ್ರಹ ಪೀಡಿತರಾಗಬಾರದು ಎಂದು ಮಲೇಷಿಯಾದ ಏರೋಸ್ಪೇಸ್ ಬಿಜಿನೆಸ್ ಯುನಿಟ್ ಟ್ಯಾಲೆಂಟ್ ಡೆವಲಪ್‌ಮೆಂಟ್ ಕೋಆರ್ಡಿನೇಟರ್ ಡಾ. ಯೊಂಗ್ ಚಿನ್ ಕೂ ಹೇಳಿದರು.
ಇಲ್ಲಿಯ ಗೋಕುಲ ಬಳಿಯ ಕೆಎಲ್ಇ ಐಟಿ ಸೆಮಿನಾರ್ ಹಾಲ್ನಲ್ಲಿ ಕೆಎಲ್ಇ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಐಇಇಇ ಉತ್ತರ ಕರ್ನಾಟಕ ಸಬ್ಸೆಕ್ಶನ್ (ಎನ್ಕೆಎಸ್ಎಸ್) ವತಿಯಿಂದ ಶನಿವಾರ ಏರ್ಪಡಿಸಿದ್ದ ಹೋಲಿಸ್ಟಿಕ್ ಇಂಜಿನಿಯರಿಂಗ್ ಫಾರ್ ಸಸ್ಟೆನೇಬಲ್ ಡೆವಲಪ್ಮೆಂಟ್ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸಂಶೋಧನಾ ಕ್ಷೇತ್ರದಲ್ಲಿ ಬಹಳಷ್ಟು ಆಸಕ್ತಿ ಬೇಕಾಗುತ್ತದೆ. ಪ್ರತಿ ದಿನ ಮತ್ತಷ್ಟು ಕ್ರಿಯಾಶೀಲರಾಗಿ ತೊಡಗಿಕೊಳ್ಳಬೇಕು. ನಿಮ್ಮ ಶಕ್ತಿ ನಿಮಗೆ ಗೊತ್ತಿರಬೇಕು. ಆಸಕ್ತಿ ಇದ್ದರೆ ಮಾತ್ರ ಸಂಶೋಧನೆಯಲ್ಲಿ ಮುಂದುವರಿಯಲು ಸಾಧ್ಯ. ಯಾವುದೇ ಒಂದು ವಿಷಯದಲ್ಲಿ ನಾನು ಹೇಗೆ ಗಟ್ಟಿಯಾಗಿ ಕೆಲಸ ಮಾಡಬಹುದು ಎಂಬುದರ ಕುತೂಹಲವೂ ಇರಬೇಕು. ಅದಕ್ಕೆ ತಕ್ಕಂತೆ ಕಠಿಣ ಪರಿಶ್ರಮವಿದ್ದರೆ ಖಂಡಿತ ಯಶಸ್ಸಿನತ್ತ ಸಾಗಬಹುದು ಎಂದರು.
ಎನ್ಕೆಕಾನ್ ಸಂಘಟಕ ರಾದ ಅಭಿಷೇಕ ದೇಶಮುಖ ಮಾತನಾಡಿ, ಎನ್ ಕೆ ಸಬ್ ಸೆಕ್ಶನ್ ಇದು ಬೆಂಗಳೂರಿನಾಚೆ ಕಾರ್ಯ ನಿರ್ವಹಿಸುತ್ತದೆ. ಇದಕ್ಕಾಗಿ ಈ ವರೆಗೆ ಬೆಳಗಾವಿ, ವಿಜಯಪುರ, ಬಾಗಲಕೋಟೆಯಲ್ಲಿ ಈಗಾಗಲೇ ಮೂರು ಸಮ್ಮೇಳನ ನಡೆಸಿ ನಾಲ್ಕನೇ ಸಮ್ಮೇಳನ ಹುಬ್ಬಳ್ಳಿ- ಧಾರವಾಡದಲ್ಲಿ ನಡೆಸಲಾಗುತ್ತಿದೆ ಎಂದರು.
ಡಾ. ಚೆಂಗಪ್ಪ ಮಾತನಾಡಿ, ಸುಸ್ಥಿರ ಅಭಿವೃದ್ಧಿ ಇಂದಿನ ಅಗತ್ಯವಾಗಿದೆ. ಇದಕ್ಕೆ ಇಂಜಿನಿಯರಿಂಗ್ ಕ್ಷೇತ್ರವು ಬೆಂಬಲವಾಗಿ ನಿಲ್ಲಬೇಕು. ಸಂಶೋಧಕರು ಇದಕ್ಕೆ ಒತ್ತು ನೀಡಬೇಕು. ಸಮಾಜಕ್ಕೆ ಅನುಕೂಲಕರ ಕೆಲಸ ಮಾಡಬೇಕು ಎಂದರು.
ಎನ್ಕೆ ಎಸ್ಎಸ್ ಸಂಸ್ಥಾಪಕ, ಹಾವೇರಿ ವಿಶ್ವವಿದ್ಯಾಲಯ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಮಾತನಾಡಿ, ಸಂಶೋಧನೆ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ಇರಬೇಕು. ವೃತ್ತಿಪರತೆಯೂ ಮುಖ್ಯ. ಆಗ ಅಭಿವೃದ್ಧಿ ಪಥ ಎಂಬುದು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಾಧ್ಯ. ಮೊದಲೆಲ್ಲ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಹೋಗುವ ಪ್ರಸಂಗ ಜಾಸ್ತಿ ಇತ್ತು. ಈಗ ಉತ್ತರ ಕರ್ನಾಟಕ ಭಾಗದಲ್ಲಿ ಹಲವು ಸಂಶೋಧನೆಗಳು ನಡೆಯುತ್ತಿವೆ. ಉದ್ಯಮಶೀಲತೆ ಬೆಳೆಯುತ್ತಿದೆ. ಇದರಿಂದ ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ಪ್ರಕಾಶ ತೆವರಿ ಮಾತನಾಡಿ, ಈ ಬಾರಿಯ ಸಮ್ಮೇಳನದ ಥೀಮ್ ಅತ್ಯಂತ ಅರ್ಥಪೂರ್ಣವಾಗಿದೆ. ಜಗತ್ತು ಇಂದು ಬಹಳಷ್ಟು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಇವುಗಳಿಗೆ ಸಹಾನುಭೂತಿಯಿಂದ ಪರಿಹಾರ ಕಂಡುಕೊಳ್ಳಬೇಕು. ಸಂಶೋಧನೆಗಳು ಆರ್ಥಿಕವಾಗಿ ಮಿತವ್ಯಯಕಾರಿ, ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಇರಬೇಕು. ಪೂರೈಕೆ ಸರಪಳಿಯನ್ನು ಗಮನದಲ್ಲಿಟ್ಟುಕೊಂಡು ವಾಸ್ತವಕ್ಕೆ ಹತ್ತಿರವಾದ ಆವಿಷ್ಕಾರಕ್ಕೆ ಹೆಚ್ಚು ಮಹತ್ವ ಇರುತ್ತದೆ ಎಂದರು.
ಡಾ. ವಿನೋದಾ, ಡಾ. ಸುಬ್ರಮಣ್ಯ, ಡಾ. ರವಿ ಹೊಸಮನಿ, ಮಂಜುನಾಥ ನಾಯಕ, ಡಾ. ರಾಜಶೇಖರ, ಡಾ. ಎಸ್.ಸಿ. ಸಜ್ಜನ ಇತರರು ಇದ್ದರು.
ಪ್ರಾಂಶುಪಾಲ ಡಾ. ಮನು ಟಿ.ಎಂ. ಸ್ವಾಗತಿಸಿದರು. ಪೂರ್ವಿ ಗುಡ್ಡದ, ವಿಜಯಲಕ್ಷ್ಮಿ, ರಿತು ಮಠದ ಅತಿಥಿಗಳನ್ನು ಪರಿಚಯಿಸಿದರು.