ಜಿಲ್ಲೆ

ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ

ಶನಿವಾರಸಂತೆ: ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಮನದಟ್ಟು ಮಾಡಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದು ರೋಟರಿ ಶನಿವಾರಸಂತೆ ಸಂಸ್ಥೆ ಅಧ್ಯಕ್ಷ ಚಂದ್ರಕಾಂತ್ ಹೇಳಿದರು.
ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ರೋಟರಿ ಶನಿವಾರಸಂತೆ ಮತ್ತು ಸೋಮವಾರಪೇಟೆ ಕಾಫಿ ಮಂಡಳಿ ವತಿಯಿಂದ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಹವಾಮಾನದ ಏರುಪೇರು, ಅತಿವೃಷ್ಟಿ-ಅನಾವೃಷ್ಟಿ, ಕಾರ್ಮಿಕರ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಕಾಫಿ ಬೆಳೆ ಬೆಳೆಯುವುದು ಸುಲಭದ ಮಾತಲ್ಲ. ಈ ಬಗ್ಗೆ ಸರ್ಕಾರಕ್ಕೆ ಮನದಟ್ಟು ಮಾಡುವ ಕೆಲಸವನ್ನು ಬೆಳೆಗಾರರು ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಕಾಫಿ ಬೆಳೆ ನಿರ್ವಹಣೆ, ಮಾರುಕಟ್ಟೆ ವ್ಯವಸ್ಥೆ ಕುರಿತು ಸೋಮವಾರಪೇಟೆ ಕಾಫಿ ಮಂಡಳಿ ಅಧಿಕಾರಿ ರಂಜಿತ್‌ಕುಮಾರ್ ಬೆಳೆಗಾರರಿಗೆ ಸಮಗ್ರ ಮಾಹಿತಿ ನೀಡಿದರು. ಕಾಫಿ ಮಂಡಳಿ ವಿಜ್ಞಾನಿ ಡಾ.ಶೀಲಾ ಮೋಹನ್, ರೋಟರಿ ಸಂಸ್ಥೆಯ ಪದಾಧಿಕಾರಿಗಳು, ಬೆಳೆಗಾರರು, ರೈತರು ಪಾಲ್ಗೊಂಡಿದ್ದರು.