ವಿಜಯವಾಣಿ ಸುದ್ದಿಜಾಲ ಉಡುಪಿ
ನಾವೆಲ್ಲರೂ ನಮ್ಮ ಸುತ್ತ ಮುತ್ತಲಿನ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪರಿಸರ ನೈರ್ಮಲ್ಯವಾಗಿದ್ದಲ್ಲಿ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಹೀಗಾಗಿ ಎಲ್ಲರೂ ತಮ್ಮ ಮನೆಯಿಂದಲೇ ಸ್ವಚ್ಛತಾ ಕಾರ್ಯ ಕೈಗೊಂಡರೆ ಅದು ಸಮಾಜದ ಸ್ವಾಸ್ಥ್ಯವನ್ನೂ ಹೆಚ್ಚಿಸಲಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಭಿಪ್ರಾಯಪಟ್ಟರು.
ಅಂತರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದ ನಿಮಿತ್ತ ಮಲ್ಪೆ ಬೀಚ್ನಲ್ಲಿ ಜಿಲ್ಲಾಡಳಿತ, ಜಿಪಂ, ಪ್ರವಾಸೋದ್ಯಮ ಇಲಾಖೆ, ಮಾಹೆ ವಿವಿ, ಕೆನರಾ ಬ್ಯಾಂಕ್, ಕರಾವಳಿ ಕಾವಲು ಪಡೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಇನ್ನಿತರ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಮಲ್ಪೆ ಕಡಲ ತೀರದಲ್ಲಿ ಕಸ ಎತ್ತುವ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.
ಪರಿಸರ ಸಂರಕ್ಷಣೆಯ ಜಾಗೃತಿ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿದ ಡಿಸಿ ಸ್ವರೂಪಾ, ಪ್ಲಾಸ್ಟಿಕ್ ಬಳಸದಂತೆ ಪ್ರಮಾಣ ವಚನ ಬೋಧಿಸಿದರು. ಬಳಿಕ ಮಲ್ಪೆ ಕಡಲತೀರದಲ್ಲಿ ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು, ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು, ವಿದ್ಯಾರ್ಥಿಗಳು, ವಿವಿಧ ಸಂಘಟನೆಯ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸಿದರು.
ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಕೆನರಾ ಬ್ಯಾಂಕ್ನ ಜನರಲ್ ಮೆನೇಜರ್ ಗಂಗಾಧರ್, ಮಾಹೆ ಹಾಗೂ ವಿವಿಶ ಶಾಲಾ-ಕಾಳೇಜುಗಳ ಯ ವಿದ್ಯಾರ್ಥಿಗಳು, ನಗರಸಭೆಯ ಸ್ವಚ್ಛತಾ ಕರ್ಮಿಗಳು, ಕೆನರಾ ಬ್ಯಾಂಕ್ ಹಾಗೂ ಕರಾವಳಿ ಕಾವಲು ಪಡೆಯ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
ಉಡುಪಿ ಕರಾವಳಿಯ ಪ್ರಮುಖ ಸಮುದ್ರ ತೀರ ಪ್ರದೇಶಗಳಾದ ಮಲ್ಪೆ ಬೀಚ್, ಕಾಪು ಬ್ಲೂ ಫ್ಲಾಗ್ ಬೀಚ್, ಡೆಲ್ಟಾ, ಕೋಡಿ, ತ್ರಾಸಿ -ಮರವಂತೆ, ಬೈಂದೂರಿನ ಸೋಮೇಶ್ವರ ಮುಂತಾದ ಕಡಲ ಕಿನಾರೆಯಲ್ಲಿ ಏಕಕಾಲದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.