ಚನ್ನಮ್ಮನ ಕಿತ್ತೂರು: ಕಿತ್ತೂರು ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಈ ವರ್ಷದ ಕಿತ್ತೂರು ಉತ್ಸವವನ್ನು ವಿಶ್ವ ಮಟ್ಟದ ಕಾರ್ಯಕ್ರಮವನ್ನಾಗಿ ಆಚರಿಸಲು ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಹೇಳಿದರು.
ಚನ್ನಮ್ಮನ ಕಿತ್ತೂರಿನ ಶೆಟ್ಟರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜರುಗಿದ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉತ್ಸವದಲ್ಲಿ ವಿವಿಧ ರಾಜ್ಯಗಳ ಆಹಾರ ಪದ್ಧತಿ ಪರಿಚಯಿಸುವ ಅನ್ನೋತ್ಸವ ಹಮ್ಮಿಕೊಳ್ಳಲಾಗುವುದು. 200ನೇ ವರ್ಷಾಚರಣೆ ಸ್ಮರಣೆಗಾಗಿ ರಾಣಿಚನ್ನಮ್ಮನ ಭಾವಚಿತ್ರವಿರುವ ಅಂಚೆಚೀಟಿ ಬಿಡುಗಡೆ ಸೇರಿದಂತೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹೆಸರನ್ನು ‘ಕಿತ್ತೂರು ಕರ್ನಾಟಕ ಸಾರಿಗೆ ಸಂಸ್ಥೆ’ ಎಂದು ಮತ್ತು ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಬದಲಾಗಿ ‘ಕಿತ್ತೂರು ರಾಣಿಚನ್ನಮ್ಮ ವಿಶ್ವವಿದ್ಯಾಲಯ’ ಎಂದು ಮರು ನಾಮಕರಣಕ್ಕಾಗಿಯೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಉತ್ಸವದ ಮೆರವಣಿಗೆಯಲ್ಲಿ ಕೇವಲ ನಂದಿ ಧ್ವಜ ಬಳಕೆಗೆ ಮಾತ್ರ ಅನುಮತಿಸಲಾಗುವುದು. ಅ.23ರಿಂದ ಮೂರು ದಿನಗಳ ಕಾಲ ಜರುಗಲಿರುವ ಉತ್ಸವದಲ್ಲಿ ರಾಷ್ಟ್ರಮಟ್ಟದ ಕಲಾವಿದರ ಜತೆಗೆ ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಲಾಗುವುದು ಎಂದು ಡಿಸಿ ರೋಷನ್ ಹೇಳಿದರು.
ಏರ್-ಶೋ ಆಯೋಜನೆಗೆ ಕ್ರಮ: ನಿರೀಕ್ಷೆಯಂತೆ ಕಿತ್ತೂರು ಉತ್ಸವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ನಿಟ್ಟಿನಲ್ಲಿ ಏರ್- ಶೋ ಆಯೋಜಿಸಲು ಕೇಂದ್ರದ ರಕ್ಷಣಾ ಸಚಿವಾಲಯವನ್ನು ಸಂಪರ್ಕಿಸಲಾಗಿದೆ. ಏರ್ ಶೋ ನಡೆಯುವ ವಿಶ್ವಾಸವಿದೆ. ವಿಶೇಷವಾಗಿ ಪಾರಂಪರಿಕ ಕ್ರೀಡೆಗಳ ಆಯೋಜನೆಗೆ ಒತ್ತು ನೀಡಿ ಪಟ್ಟಿ ತಯಾರಿಸಲಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ಆಯೋಜನೆಗೆ ಚಿಂತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಕಿತ್ತೂರು ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಎಲ್ಲರ ಸಹಕಾರ ಅಗತ್ಯ ಎಂದರು. ಸಾನ್ನಿಧ್ಯ ವಹಿಸಿದ್ದ ಕಲ್ಮಠದ ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಮಾತನಾಡಿ, ಅರ್ಥಪೂರ್ಣ ಉತ್ಸವ ಆಚರಣೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಸ್ಥಳೀಯರ ಸಹಕಾರವೂ ಇರಲಿ. 200ನೇ ವಿಜಯೋತ್ಸವದ ಸ್ಮರಣೆಯನ್ನು ಅಚ್ಚಳಿಯವಾಗಿಸೋಣ ಎಂದರು.
ಜಿಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯ ಬಾಪಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಉಪವಿಭಾಗಾಧಿಕಾರಿಗಳಾದ ಪ್ರಭಾವತಿ ಫಕೀರಪುರ, ಶ್ರವಣ ನಾಯಕ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಇದ್ದರು.
ಉತ್ಸವದಲ್ಲಿ ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ವಿಚಾರಗೋಷ್ಠಿ, 200ನೇ ವರ್ಷದ ವಿಜಯೋತ್ಸವದ ಪ್ರಯುಕ್ತ 200 ಸಾಧಕರ ಸನ್ಮಾನ, ಮಲ್ಲಸರ್ಜ ಪುತ್ಥಳಿ ನಿರ್ಮಾಣ, ಸ್ಮಾರಕಗಳ ಸಂರಕ್ಷಣೆ, ಮೆರವಣಿಗೆಯಲ್ಲಿ ಪೊಲೀಸ್, ಎಂಎಲ್‌ಐಆರ್‌ಸಿ ಬ್ಯಾಂಡ್ ಕರೆತರುವ ಮೂಲಕ ಕಿತ್ತೂರು ಉತ್ಸವವನ್ನು ಸ್ಮರಣೀಯವಾಗಿಸಬೇಕು ಎಂದು ಸಭೆಯಲ್ಲಿ ಸಾರ್ವಜನಿಕರು ಸಲಹೆ ನೀಡಿದರು.