ಬೆಂಗಳೂರು: ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯ ದತ್ತಾಂಶವನ್ನು ಒಳಮೀಸಲಾತಿ ಹೊರತಾಗಿ ಇತರ ಯೋಜನೆಗಳ ಸೌಲಭ್ಯಕ್ಕೆ ಪರಿಗಣಿಸುವುದಿಲ್ಲ ಎಂದು ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ, ಶಾಸಕ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.
ಬಿಬಿಎಂಪಿ ಪಶ್ಚಿಮ ವಲಯದ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಹನುಮಂತಪ್ಪ ಕಾಲೊನಿಯ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಸಮೀಕ್ಷಾ ಕಾರ್ಯದ 2ನೇ ಹಂತದ ವಿಶೇಷ ಶಿಬಿರದ ಪರಿಶೀಲನೆ ವೇಳೆ ಅವರು ಈ ವಿಷಯವನ್ನು ತಿಳಿಸಿದರು.
ಸಮೀಕ್ಷಾ ಕಾರ್ಯವನ್ನು ಯಶಸ್ವಿಗೊಳಿಸಲು ರೇಡಿಯೋ ಜಿಂಗಲ್ಸ್ ಹಾಗೂ ಕಸ ಸಂಗ್ರಹಿಸುವ ಆಟೋ ಟಿಪ್ಪರ್‌ಗಳಲ್ಲಿ ಧ್ವನಿವರ್ಧಕಗಳ ಮೂಲಕ ಹೆಚ್ಚು ಪ್ರಚಾರ ಮಾಡಬೇಕು. ಇದರಿಂದ ಪರಿಣಾಮಕಾರಿಯಾಗಿ ಸಮೀಕ್ಷೆ ನಡೆಸುವಂತೆ ಸೂಚಿಸಿ ನಾಗರಿಕರು ಸಮೀಕ್ಷೆಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.
ವಲಯ ಜಂಟಿ ಆಯುಕ್ತ ಸಂಗಪ್ಪ ಮಾತನಾಡಿ, ಸಮೀಕ್ಷೆ ಯಶಸ್ವಿಯಾಗಿ ನಡೆಸಬೇಕೆಂಬ ಉದ್ದೇಶದಿಂದ ಪ್ರತಿನಿತ್ಯ ಅಧಿಕಾರಿಗಳೊಂದಿಗೆ ಪರಿಶೀಲನೆ ಸಭೆ ನಡೆಸಿ ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗುತ್ತಿದೆ. ಜತೆಗೆ ಸಮುದಾಯದ ಮುಖಂಡರೊಂದಿಗೂ ಸಭೆ ನಡೆಸಿ ಸಮೀಕ್ಷಾ ಕಾರ್ಯಕ್ಕೆ ಸಹಕಾರ ನೀಡಲು ಮನವಿ ಮಾಡಲಾಗಿದೆ. ಬೀದಿ ನಾಟಕ, ಭಿತ್ತಿಪತ್ರ, ಕರಪತ್ರ ವಿತರಿಸಿ ಜನಜಾಗೃತಿ ಮೂಡಿಸಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್, ಪಾಲಿಕೆಯ ಕಂದಾಯ ಅಧಿಕಾರಿ ಕೆ.ಶ್ರೀನಿವಾಸ್, ಪರಿಶಿಷ್ಟ ಜಾತಿ ಸಮುದಾಯದ ಮುಖಂಡರು ಹಾಜರಿದ್ದರು.