ಜಿಲ್ಲೆ

ಕೆಲ ಗಣತಿದಾರರರಿಂದ ತಪ್ಪು ಮಾಹಿತಿ ನಮೂದು: ರಾಜ್ಯ ಸಂಯೋಜಕ ಕಿರಣ್‌ಕುಮಾರ್ ಆರೋಪ

ಮಂಡ್ಯ: ಒಳಮೀಸಲಾತಿಗಾಗಿ ನಡೆಯುತ್ತಿರುವ ಸಮೀಕ್ಷೆಯಲ್ಲಿ ಕೆಲ ಗಣತಿದಾರರು ಸರಿಯಾದ ಮಾಹಿತಿ ಸಂಗ್ರಹಿಸದೇ ತಮ್ಮಿಚ್ಚೆಯಂತೆ ಮಾಹಿತಿ ಪಡೆಯುತ್ತಿದ್ದಾರೆ ಎಂದು ಪರಿಶಿಷ್ಟ ಜಾತಿ ಕೊರಮ, ಕೊರಚ, ಕುರುವನ್, ಕೇಪ್‌ಮಾರಿಸ್ ವೈಜ್ಞಾನಿಕ ಒಳಮೀಸಲಾತಿ ಅನುಷ್ಠಾನ ಹೋರಾಟ ಸಮಿತಿಯ ರಾಜ್ಯ ಸಂಯೋಜಕ ಕಿರಣ್‌ಕುಮಾರ್ ಆರೋಪಿಸಿದರು.

ಗಣತಿಯಲ್ಲಿ ಉದ್ದೇಶ ಪೂರ್ವಕವಾಗಿ ತಪ್ಪಾಗಿ ನಮೂದಿಸಲಾಗುತ್ತಿದೆ. ಅಂತೆಯೇ 101 ಜಾತಿಗಳ ಪೈಕಿ 98 ಜಾತಿಗಳ ಮಾಹಿತಿಯನ್ನು ಸರಿಯಾಗಿ ಸಂಗ್ರಹ ಮಾಡುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಆಯೋಗದ ಮುಖ್ಯಸ್ಥರು, ಕಂಟ್ರೋಲ್ ರೂಂ ಗಮನಕ್ಕೆ ತಂದರೂ ಸರಿಪಡಿಸಲು ಮುಂದಾಗಿಲ್ಲ. ಕೂಡಲೇ ಸರಿಯಾದ ತರಬೇತಿ ಪಡೆಯದವರಿಗೆ ತರಬೇತಿ ನೀಡಿ, ಕೆಲವು ಗಣತಿದಾರರಿಂದ ಆಗುತ್ತಿರುವ ಲೋಪ ಸರಿಪಡಿಸಬೇಕು. ಗಣತಿಯ ಸಮಯದ ಅವಧಿಯನ್ನು ವಿಸ್ತರಣೆ ಮಾಡಬೇಕು. ಸಮಸ್ಯೆ ಬಗೆಹರಿಸಲು ಸರ್ಕಾರ, ಆಯೋಗ ಅಥವಾ ಸಂಬಂಧಿತ ಇಲಾಖೆ ಅಧಿಕಾರಿಗಳು ಮುಂದಾಗದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಗೌರವಾಧ್ಯಕ್ಷ ಕೆ.ವಿ.ನಾಗರಾಜು, ಗೌರವ ಸಲಹೆಗಾರ ಎಚ್.ವಿ.ರಾಮಶೆಟ್ಟಿ, ಒಸಿಸಿಐ ಜಿಲ್ಲಾಧ್ಯಕ್ಷ ಟಿ.ಸಿ.ಗುರಪ್ಪ, ತಾಲೂಕು ಉಪಾಧ್ಯಕ್ಷ ರಾಜೇಂದ್ರ ಇದ್ದರು.