ಜಿಲ್ಲೆ

ಮರುಕಳಿಸಿದ ಬೈಕ್ ವ್ಹೀಲಿಂಗ್ ಹಾವಳಿ, ಹೆದ್ದಾರಿಗಳಲ್ಲಿ ಅಪಾಯಕಾರಿ ಸಾಹಸ ನಂಬರ್ ಪ್ಲೇಟ್ ಇಲ್ಲದ ಬೈಕ್‌ಗಳ ಬಳಕೆ

Bengaluru Rural

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಕರೊನಾ ಲಾಕ್‌ಡೌನ್ ಸಂದರ್ಭದಲ್ಲಿ ತಗ್ಗಿದ್ದ ಬೈಕ್ ವ್ಹೀಲಿಂಗ್ ಹಾವಳಿ ಮರುಕಳಿಸಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳು ಕಿಡಿಗೇಡಿಗಳ ಮೋಜು-ಮಸ್ತಿಗೆ ಬಳಕೆಯಾಗುತ್ತಿವೆೆ. ತಮ್ಮ ಪ್ರಾಣದೊಂದಿಗೆ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಕಿಡಿಗೇಡಿಗಳ ಕೃತ್ಯಕ್ಕೆ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿ, ದೊಡ್ಡಬಳ್ಳಾಪುರ ಹಾಗೂ ಹೊಸಕೋಟೆ ಟೋಲ್‌ಗಳ ಸಮೀಪದಲ್ಲಿ ಇಂಥ ಹುಚ್ಚಾಟ ಮಿತಿಮೀರಿದ್ದು, ಸಾರ್ವಜನಿಕರು ತೀವ್ರ ಆತಂಕಗೊಂಡಿದ್ದಾರೆ.

ವಿದ್ಯಾರ್ಥಿಗಳೇ ಹೆಚ್ಚು: ಐಟಿಬಿಟಿ ಉದ್ಯೋಗಿಗಳು ವಾರಾಂತ್ಯದಲ್ಲಿ ಇಂಥ ಹುಚ್ಚಾಟಕ್ಕೆ ಕೈ ಹಾಕುತ್ತಿದ್ದುದುಂಟು. ಕೆಲ ಸ್ಥಳೀಯ ಪುಂಡರು ಇಂಥ ದುಸ್ಸಾಹಸ ನಡೆಸುವುದು ಸಾಮಾನ್ಯವಾಗಿತ್ತು. ಆದರೆ ಇತ್ತೀಚೆಗೆ ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಗಳು ಈ ವ್ಯಸನ ಅಂಟಿಸಿಕೊಂಡಿದ್ದು, ಪ್ರತಿನಿತ್ಯ ಹೆದ್ದಾರಿಗಳಲ್ಲಿ ಇಂಥವರ ಹಾವಳಿ ಕಾಣಸಿಗುತ್ತಿದೆ. ಕರೊನಾ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು ಬಂದ್ ಆಗಿವೆ. ಆದರೆ ಲಾಕ್‌ಡೌನ್ ತೆರವುಗೊಂಡಿರುವುದರಿಂದ ವಿದ್ಯಾರ್ಥಿಗಳು ಸಿಕ್ಕಸಿಕ್ಕ ಬೈಕ್‌ಗಳನ್ನೇರಿ ಹೆದ್ದಾರಿಗಳಲ್ಲಿ ಹುಚ್ಚುಕುದುರೆಯಂತಾಡುತ್ತಿದ್ದಾರೆ. ಅದರಲ್ಲೂ ಅಪ್ತಾಪ್ತರೇ ಹೆಚ್ಚು ಇಂಥ ಗೀಳಿಗೆ ಬಿದ್ದಿರುವುದು ಕಂಡುಬರುತ್ತಿದೆ. ಅಪ್ರಾಪ್ತರು ವಾಹನ ಚಾಲನೆ ಮಾಡುವುದು, ಅಂಥವರಿಗೆ ವಾಹನ ನೀಡುವುದು ಎರಡೂ ಕಾನೂನು ರೀತಿ ಅಪರಾಧವಾಗಿದ್ದರೂ, ಅಪ್ರಾಪ್ತರ ವಾಹನ ಚಾಲನೆಗೆ ಬ್ರೇಕ್ ಬಿದ್ದಿಲ್ಲ.

ಹೆದ್ದಾರಿಗಳಲ್ಲೇ ಉಪಟಳ: ನೆಲಮಂಗಲ ರಾಷ್ಟ್ರೀಯ ಹೆದ್ದಾರಿ, ಹೊಸಕೋಟೆ, ದೇವನಹಳ್ಳಿ ತಾಲೂಕಿನ ಹೆದ್ದಾರಿ ಟೋಲ್‌ಗಳ ಬಳಿ ಬೈಕ್ ವ್ಹೀಲಿಂಗ್ ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ. ಮುಖ್ಯವಾಗಿ ವಾರಾಂತ್ಯಗಳಲ್ಲಿ ಇದರ ಪ್ರಮಾಣ ಹೆಚ್ಚುತ್ತಿದೆ. ನಂದಿ ಗಿರಿಧಾಮಕ್ಕೆ ಸಾಗುವ ಮಾರ್ಗ ಇಂಥ ಕಿಡಿಗೇಡಿಗಳಲ್ಲಿ ೇವರಿಟ್ ಸ್ಪಾಟ್ ಎನಿಸಿದೆ.

6 ತಿಂಗಳಿಂದ 1 ವರ್ಷ ಜೈಲು: ಠಾಣೆಯಲ್ಲಿ ದೂರು ದಾಖಲಾದರೆ ದಂಡದ ಜತೆಗೆ 6 ತಿಂಗಳಿಂದ 1 ವರ್ಷ ಜೈಲು ಶಿಕ್ಷೆಯಾಗಲಿದೆ. ಐಪಿಸಿ ಸೆಕ್ಷನ್ 279, 336 ಅಡಿಯಲ್ಲಿ ಮಾನವರ ಪ್ರಾಣಹಾನಿಗೆ ಸಂಬಂಧಪಟ್ಟಂತೆ ಅತಿವೇಗ, ಅಜಾಗರೂಕವಾದ ಅಪಾಯಕಾರಿ ಚಾಲನೆ ಆರೋಪದಡಿ ಪ್ರಕರಣ ದಾಖಲಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಿತ್ರ ಶಬ್ದ: ಪುಂಡರು ವಾಹನಗಳನ್ನು ವಿಚಿತ್ರವಾಗಿ ಮಾರ್ಪಾಡು ಮಾಡಿರುತ್ತಾರೆ. ಮುಖ್ಯವಾಗಿ ಕರ್ಕಶ ಶಬ್ದ ಬರುವಂತೆ ಸೈಲೆನ್ಸರ್ ಅಳವಡಿಸಿಕೊಂಡಿರುತ್ತಾರೆ. ಹಿಂದೆ ಇಂಥ ವಾಹನಗಳ ಶಬ್ದ ಬಂದರೆ ಮುಂದಿನ ವಾಹನ ಸವಾರರು ಬೆಚ್ಚಿಬೀಳುವುದು ಸಾಮಾನ್ಯವಾಗಿದೆ. ಹಲವು ಬಾರಿ ಇಂಥ ಶಬ್ದದ ಭೀತಿಯಿಂದ ಇತರ ವಾಹನ ಚಾಲಕರ ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.

ನಂಬರ್‌ಪ್ಲೇಟ್ ಇಲ್ಲ: ಪೊಲೀಸರ ಕೈಗೆ ಸಿಕ್ಕಿ ಬೀಳಬಾರದೆಂದು ವ್ಹೀಲಿಂಗ್ ಮೊದಲು ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್ ತೆಗೆಯಲಾಗುತ್ತಿದೆ. ಕೆಲವರು ನಂಬರ್ ಪ್ಲೇಟ್ ಮೇಲೆ ವಿಚಿತ್ರ ಸ್ಟಿಕ್ಕರ್ ಅಂಟಿಸಿ ನಂಬರ್ ಕಾಣದಂತೆ ಮಾಡುತ್ತಿದ್ದಾರೆ. ಮತ್ತೆ ಕೆಲವರು ನಕಲಿ ನಂಬರ್‌ಪ್ಲೇಟ್ ಬಳಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸದ ಹೊರತು ಇದರ ಹಾವಳಿಗೆ ಕಡಿವಾಣ ಬೀಳುವುದಿಲ್ಲ ಎನ್ನುವುದು ಸಾರ್ವಜನಿಕರ ಅಳಲು.

ಮೌನವಾಗಿರುವ ಪೊಲೀಸರು: ಕರೊನಾ ಹಿನ್ನೆಲೆಯಲ್ಲಿ ಪೊಲೀಸರು ಯಾವುದೇ ವಾಹನಗಳ ತಪಾಸಣೆ ನಡೆಸುತ್ತಿಲ್ಲ. ಡಿಎಲ್, ಹೆಲ್ಮೆಟ್ ಮತ್ತಿತರ ಯಾವುದೇ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ವಾಹನಗಳನ್ನು ಅಡ್ಡಗಟ್ಟುತ್ತಿಲ್ಲ. ಇದರ ದುರ್ಲಾಭ ಪಡೆದ ಕಿಡಿಗೇಡಿಗಳು ತ್ರಿಬಲ್ ರೈಡಿಂಗ್ ಮಾಡುವುದು, ಹೆಲ್ಮೆಟ್ ಧರಿಸದಿರುವುದು, ವೇಗಮಿತಿ ಮೀರಿ ವಾಹನ ಚಲಾಯಿಸುವುದು ಹೀಗೆ ಮನಸೋ ಇಚ್ಚೆ ವರ್ತಿಸಿ ತಮ್ಮ ಪ್ರಾಣದೊಂದಿಗೆ ರಸ್ತೆಯಲ್ಲಿ ಸಾಗುವ ಇನ್ನಿತರ ಜೀವಕ್ಕೂ ಸಂಚಾಕಾರ ತರುತ್ತಿದ್ದಾರೆ.

ಬೈಕ್ ವ್ಹೀಲಿಂಗ್‌ನಂತಹ ಅಪಾಯಕಾರಿ ಸಾಹಸ ಮಾಡುವ ಕಿಡಿಗೇಡಿಗಳ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ವಾಹನ ಸವಾರರು ಹಾಗೂ ಪಾಲಕರ ವಿರುದ್ಧವೂ ಕೇಸ್ ದಾಖಲಿಸಲಾಗುತ್ತಿದೆ. ವಾರಾಂತ್ಯಗಳಲ್ಲಿ ವಿಶೇಷ ಕಾರ್ಯಾಚರಣೆ ಮೂಲಕ ಇಂಥ ಉಪಟಳಕ್ಕೆ ಬ್ರೇಕ್ ಹಾಕಲಾಗುತ್ತಿದೆ. ರವಿ ಡಿ. ಚನ್ನಣ್ಣನವರ್, ಪೊಲೀಸ್ ವರಿಷ್ಠಾಧಿಕಾರಿ