ಸವದತ್ತಿ: ಅತಿವೃಷ್ಟಿಯಿಂದ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ವಿಮೆ ಕಂತು ತುಂಬಿದ ರೈತರಿಗೆ ಪ್ರಧಾನಮಂತ್ರಿ ಸಲ್ ಬಿಮಾ ಯೋಜನೆಯಡಿ ಕೂಡಲೇ ಮಧ್ಯಂತರ ಪರಿಹಾರಕ್ಕೆ ಆಗ್ರಹಿಸಿ ರೈತ ಸೇನೆ ಹಾಗೂ ಹಸಿರು ಸೇನೆಯಿಂದ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಸಂಘದ ರಾಜ್ಯ ಕಾರ್ಯದರ್ಶಿ ಬಸವರಾಜ ಬಿಜ್ಜುರ ಮಾತನಾಡಿ, ಮಳೆಯಿಂದಾಗಿ ತಾಲೂಕಿನಲ್ಲಿ ಗೋವಿನಜೋಳ, ಹತ್ತಿ, ಉಳ್ಳಾಗಡ್ಡಿ, ಬಳ್ಳೊಳ್ಳಿ, ಸೋಯಾಬಿನ್ ಸೇರಿ ವಿವಿಧ ಬೆಳೆಗಳು ಸಂಪೂರ್ಣ ನಾಶವಾಗಿವೆ. ಹೀಗಾಗಿ, ರೈತರು ಸಂಕಷ್ಟ ಎದುರಿಸುವಂತಾಗಿದೆ. ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ತಾಲೂಕಾಧ್ಯಕ್ಷ ಸುರೇಶ ಸಂಪಗಾಂವಿ ಮಾತನಾಡಿ, ಲಕ್ಷಾಂತರ ರೂಪಾಯಿ ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರಿಗೆ ಬೆಳೆಗಳು ಕೈ ಸೇರುವ ನಿರೀಕ್ಷೆ ಹುಸಿಯಾಗಿದೆ. ಹೆಸರು ಕಾಳುಗಳನ್ನು ಕೇಂದ್ರದಲ್ಲಿ ಖರೀದಿಸುತ್ತಿಲ್ಲ. ಸರ್ಕಾರ ರೈತರ ನೆರವಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಶಿವಾನಂದ ಸರದಾರ, ಗೌಡಪ್ಪ ಪಾಟೀಲ, ಜಗದೀಶ ತೋಟಗಿ, ದ್ಯಾಮನಗೌಡ ಪಾಟೀಲ, ಮಾಂತೇಶ ಚರಂತಿಮಠ, ವಸಂತಗೌಡ ಪಾಟೀಲ, ಬಿ.ಎಸ್.ಪಾಟೀಲ, ಶಿವಪ್ಪ ಮಲ್ಲೂರ, ಮಲ್ಲಿಕಾರ್ಜುನ ಕರಿಗೌಡ್ರ, ಸುರೇಶ ಅಂಗಡಿ, ಮಾಂತೇಶ ಮುತವಾಡ, ರಮೇಶ ಗುಮ್ಮಗೋಳ, ರಾಮರಾಜ್ ಇನಾಮದಾರ, ಸಿದ್ದಪ್ಪ ಚಂದರಗಿ, ಯಲ್ಲಪ್ಪ ಅಂತಕನವರ, ರಮೀಜಾ ಪಾತುನಾಯಕರ, ನೀಲವ್ವ ಗುಳಗೋಳ, ಸುನಂದಾ ಬಡಿಗೇರ, ಮಂಜು ಕುರಿ ಹಾಗೂ ರೈತರು ಇದ್ದರು.