ಜಿಲ್ಲೆ

ಮಕ್ಕಳ ಆಸಕ್ತಿ ಗುರುತಿಸಿ ತರಬೇತಿ ಕೊಡಿಸಿ

ಅಶೋಕ್ ಕುಮಾರ್ ಎನ್

ಸಿಂಧನೂರು: ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಸಬಲರಾಗಲು ಸ್ಕೇಟಿಂಗ್ ಸಹಕಾರಿಯಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ಎಪಿಎಂಸಿ ಶ್ರಮಿಕರ ಭವನದ ಬಳಿ ಕಲ್ಯಾಣ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ದಿಂದ ಪ್ರಥಮ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಶಿಪ್-2023 ಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಸ್ಕೇಟಿಂಗ್‌ನಂಥ ದೈಹಿಕ ಸಾಮರ್ಥ್ಯದ ಕ್ರೀಡೆಗಳಿಂದ ಮಕ್ಕಳು ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು.

ಸೂಕ್ತ ಅವಕಾಶ ಸಿಕ್ಕರೆ ತಾಲೂಕಿನ ಮಕ್ಕಳಲ್ಲಿ ಪ್ರತಿಭೆ ಅನಾವರಣಗೊಳಿಸುವ ಸಾಮರ್ಥ್ಯವಿದೆ. ಮಕ್ಕಳ ಆಸಕ್ತಿ ಗುರುತಿಸಿ, ಅವರಿಗೆ ತರಬೇತಿ ಕೊಡಿಸುವ ಕಾರ್ಯ ಪಾಲಕರಿಂದಾಗಬೇಕು. ಸ್ಕೇಟಿಂಗ್ ಕ್ರೀಡಾ ಮೈದಾನವಾದರೆ ಅನುಕೂಲವಾಗಲಿದೆ. ಈ ಬಗ್ಗೆ ಚರ್ಚಿಸಿ, ಸ್ಥಳದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಬಾದರ್ಲಿ ತಿಳಿಸಿದರು.


ಕಲ್ಯಾಣ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಸಿ.ಎಂ.ಶಿವಪ್ರಕಾಶ ಮಾತನಾಡಿ, ಸ್ಕೇಟಿಂಗ್ ಮಕ್ಕಳ ಸಮತೋಲನ ಕಾಪಾಡುವುದರೊಂದಿಗೆ ಸ್ನಾಯುಗಳ ಸಮನ್ವಯ ಹೆಚ್ಚಿಸುತ್ತದೆ ಎಂದರು. ಅಸೋಸಿಯೇಷನ್ ಉಪಾಧ್ಯಕ್ಷ ಟಿ.ಎಸ್.ವಿಜಯಕುಮಾರ, ವರ್ತಕರ ಸಂಘದ ಅಧ್ಯಕ್ಷ ಮಲ್ಲನಗೌಡ ಕಾನಿಹಾಳ, ಸಿ.ಟಿ.ಪಾಟೀಲ್, ಖಾಜಿ ಮಲ್ಲಿಕ್ ವಕೀಲ, ಛತ್ರಪ್ಪ ಕುರುಕುಂದ, ಗೀತಾಬಾಯಿ ಮೇಟಿ ಇದ್ದರು.