ಜಿಲ್ಲೆ

ಮೈಸೂರಿನಲ್ಲಿ ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮ

ಆರ್.ಕೃಷ್ಣ

ಮೈಸೂರು: ಯಾವ ದೇಶದಲ್ಲಿ ಏಕತೆ ಮತ್ತು ಐಕ್ಯತೆ ಇರುತ್ತದೆಯೋ ಆ ದೇಶ ಸಮೃದ್ಧಿ ಮತ್ತು ಅಭಿವೃದ್ಧಿ ಕಾಣಲಿದೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಚಿಕ್ಕಮಂಗಳೂರಿನ ಇಮ್ರಾನ್ ಅಹ್ಮದ್ ಬೇಗ್ ಹೇಳಿದರು.

ಯುವ ವ್ಯವಹಾರಗಳ ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ್-ನೆಹರು ಯುವ ಕೇಂದ್ರದಿಂದ ಸರಸ್ವತಿಪುರಂನ ಗಂಗೋತ್ರಿ ಬಡಾವಣೆಯಲ್ಲಿ ಸೋಮವಾರ ಆಯೋಜಿಸಿದ್ದ ಅಂತರ ಜಿಲ್ಲಾ ಯುವ ವಿನಿಮಯ (ಮೈಸೂರು-ಧಾರವಾಡ) ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ಬಿಟ್ಟರೆ ಬೇರೆ ಯಾವುದೇ ದೇಶದಲ್ಲಿ ನಮ್ಮಲ್ಲಿ ಇರುವಷ್ಟು ವಿಭಿನ್ನ ಸಂಸ್ಕೃತಿಯನ್ನು ನೋಡಲು ಸಾಧ್ಯವಿಲ್ಲ. ಎಲ್ಲಿ ಏಕತೆ ಹಾಗೂ ಐಕ್ಯತೆ ಇರುತ್ತದೆಯೋ ಅಲ್ಲಿ ಸಮೃದ್ಧಿ ಮತ್ತು ಅಭಿವೃದ್ಧಿ ಇರಲಿದೆ ಎಂದರು.

ಸ್ವಾಮಿ ವಿವೇಕನಾಂದ ಅವರು ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಭಾರತದ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಿಯಿಸಿ ಮನೆ ಮಾತಾಗುವಂತೆ ಮಾಡಿದರು. ಈ ಮೂಲಕ ವಿಶ್ವಕ್ಕೆ ಭಾರತದ ಸಂಸ್ಕೃತಿಯನ್ನು ಪರಿಚಯಿಸಿದ ಧೀಮಂತ ನಾಯಕ ಎಂದು ಬಣ್ಣಿಸಿದರು.

ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮದ ಉದ್ದೇಶ ಸಂಸ್ಕೃತಿಕ, ಸಮಾಜಿಕ, ಭೌದ್ಧಿಕ ವಿಷಯಗಳ ಸಂಪೂರ್ಣ ಮಾಹಿತಿಯನ್ನು ತಿಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಸಾಮಾಜಿಕ ವಿನಿಮಯ ಭಾರತದಲ್ಲಿ ಜನರಲ್ಲಿ ವಿಭಿನ್ನತೆಗಳು ಹೆಚ್ಚು ಕಾಡುತ್ತಿದೆ. ಭಾರತದಲ್ಲಿ ಯಾವುದೇ ಭಾಗದಲ್ಲಿ ಜನಿಸಿದರೂ, ಯಾವುದೇ ಭಾಷೆ ಮಾತನಾಡಿದರೂ ನಾವೆಲ್ಲರೂ ಒಂದೇ ಎಂಬ ನಿಲ್ಲುವನ್ನು ಹೊಂದಬೇಕು. ಎಲ್ಲರೂ ಸಾಮಾಜಿಕ ಹೊಣೆ ಹೋರಬೇಕು ಎಂದು ಹೇಳಿದರು.

ಪ್ರಸುತ್ತ ದಿನಗಳಲ್ಲಿ ಮನುಷ್ಯನು ಪ್ರಕೃತಿಯ ಮೇಲೆ ವಿಕೋಪ ತೋರುತ್ತಿದ್ದಾನೆ. ಆದ್ದರಿಂದ ಪರಿಸರವನ್ನು ಸಂರಕ್ಷಣೆ ಮಾಡಿ ಇಟ್ಟುಕೊಂಡಾಗ ಮಾತ್ರ ನಾವು ಮತ್ತು ನೆರೆ ಹೊರೆಯವರು ಉತ್ತಮವಾಗಿ ಜೀವನ ನಡೆಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೌದ್ಧಿಕ ಜೀವನದಲ್ಲಿ ಮನುಷ್ಯನು ಪ್ರಾಣಿಯಾಗೇ ಬದುಕುವುದನ್ನು ಬಿಟ್ಟು ಮಾನವ ಜೀವನ ವರದಾನವಾಗಿ ಸಿಕ್ಕಿದೆ. ಆದ್ದರಿಂದ ಎಲ್ಲರೂ ವಿಶ್ವ ಮಾನವರಾಗಿ ಬದುಕಬೇಕು ಎಂದರು.

ಕೇಂದ್ರ ಸರ್ಕಾರದ ಈ ಯೋಜನೆಯು ಸಾಮಾಜಿಕವಾಗಿ, ಬೌದ್ಧಿಕವಾಗಿ, ಸಂಸ್ಕೃತಿಕವಾಗಿ ಬೆಳವಣಿಗೆ ಉದ್ದೇಶವನ್ನು ಹೊಂದಿದೆ. ಆದ್ದರಿಂದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ನಗರದ ಸರ್ಕಾರಿ ಯೂತ್ ಹಾಸ್ಟೆಲ್‌ನ ವ್ಯವಸ್ಥಾಪಕ ಡಾ.ಪ್ರಸಾದ್, ಯೋಜನಾ ನಿರ್ದೇಶಕರಾದ ಚಾಮರಾಜನಗರ ಜಿಲ್ಲಾ ಕಾರ್ಮಿಕ ಯೋಜನಾ ಸೊಸೈಟಿ ಎನ್.ಮಹೇಶ್, ಕರಾಟೆ ಶಿಕ್ಷಕ ಗುರುಪ್ರಶಾದ್, ಜಿಲ್ಲಾ ಯುವ ಅಧಿಕಾರಿ ನೆಹರು ಯುವ ಕೇಂದ್ರ ಅಭಿಷೇಕ್ ಚವರೆ, ಆಯೋಜಕರಾದ ಸಿ.ಅಮಿತ್ ಕುಮಾರ್, ಚಿರಂಜೀವಿ, ತೇಜಸ್ ಇತರರು ಇದ್ದರು.