ಜಿಲ್ಲೆ

ಸೊಳ್ಳೆಗಳ ಲಾರ್ವಾ ಸರ್ವೇಯಾಗಲಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಮಂಡ್ಯ: ಡೆಂಘೆ, ಮಲೇರಿಯಾ, ಚಿಕುನ್‌ಗುನ್ಯಾ ಸೇರಿದಂತೆ ಸಾಂಕ್ರಮಿಕ ರೋಗಗಳು ಸೊಳ್ಳೆಗಳ ಕಡಿತದಿಂದ ಉಂಟಾಗುತ್ತದೆ. ಇದನ್ನು ತಡೆಗಟ್ಟಲು ರೋಗ ಹೆಚ್ಚಾಗಿ ಹರಡುವ ಸ್ಥಳಗಳನ್ನು ಗುರುತಿಸಿ ಪ್ರತಿ ಶುಕ್ರವಾರ ನೀರಿನ ಮಾದರಿಗಳನ್ನು ಪಡೆದು ಲಾರ್ವಾ ಸರ್ವೇ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಡೆಂಘೆ ರೋಗ ನಿಯಂತ್ರಣ ಕುರಿತ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಾರ್ವಾ ಸಮೀಕ್ಷೆ ಮೂಲಕ ಡೆಂಘೆ  ರೋಗ ಉಂಟು ಮಾಡುವ ಸೊಳ್ಳೆ ಉತ್ಪತ್ತಿಯಾಗದಂತೆ ತಡೆಗಟ್ಟಲಾಗುವುದು ಎಂದರು.

ಕಟ್ಟಡ ನಿರ್ಮಿಸುವ ಪ್ರದೇಶ, ಗ್ಯಾರೇಜ್, ದನ ಕರು ಸಾಕಾಣಿಕೆ ಪ್ರದೇಶ, ಗುಜರಿ, ಎಳನೀರು ಮಾರುವ ಸ್ಥಳ, ನೀರಿನ ತೊಟ್ಟಿಗಳು ಹಾಗೂ ನೀರು ನಿಲುಗಡೆಯಾಗುವ ಪ್ರದೇಶಗಳಲ್ಲಿ ಸೊಳ್ಳೆ ನಿಯಂತ್ರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ. ಲಾರ್ವಾ ಸರ್ವೇ ನಡೆಸಲು ಸಾರ್ವಜನಿಕರು ಸಹಕರಿಸದಿದ್ದಲ್ಲಿ ಹಾಗೂ ಸರ್ವೇಯ ನಂತರ ತಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ 2025 ರ ಜನವರಿ ಮಾಹೆಯಿಂದ ಇಲ್ಲಿಯವರೆಗೆ 17 ಡೆಂಘೆ, 4 ಚಿಕುನ್‌ಗುನ್ಯಾ ಪ್ರಕರಣ ಪತ್ತೆಯಾಗಿದೆ. ಡೆಂಘೆ ಪ್ರಕರಣಗಳಿಗಾಗಿ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಿ. ವೈದ್ಯರು ಸೂಕ್ತ ಔಷಧೋಪಚಾರ ನೀಡಿರುತ್ತಾರೆ. ಸಾರ್ವಜನಿಕರು ರೋಗ ಬರುವ ಮೊದಲೇ ಮುನ್ನಚ್ಚರಿಕೆ ವಹಿಸಬೇಕು. ಸಕ್ಕರೆ ಕಾರ್ಖಾನೆಗಳಿಗೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಕಬ್ಬು ಕಟಾವು ಕಾರ್ಮಿಕರು ಜಿಲ್ಲೆಗೆ ಆಗಮಿಸಿದ್ದು, ಅವರಿಗೆ ಎಲ್ಲ ಮೂಲ ವ್ಯವಸ್ಥೆ ಒದಗಿಸಿರುವ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಖಾತ್ರಿ ಪಡಿಸಿಕೊಳ್ಳಬೇಕು. ಅವರು ವಾಸಿಸುವ ಸ್ಥಳದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಜಾಗೃತಿ ಮೂಡಿಸಿ ಎಂದರು.

ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮ ಹಾಗೂ ಸೊಳ್ಳೆ ಕಚ್ಚುವಿಕೆಯಿಂದ ಉಂಟಾಗುವ ಅರೋಗ್ಯ ಸಮಸ್ಯೆಗಳ ಬಗ್ಗೆ ಕುರಿತು ಶಾಲಾ, ಕಾಲೇಜುಗಳಲ್ಲಿ ಅರಿವು ಮೂಡಿಸಿ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಡಿಪೋಗಳಲ್ಲಿ ನಿರುಪಯುಕ್ತ ಟೈಯರ್ ಹಾಗೂ ಹಳೆಯ ಯಂತ್ರೋಪಕರಣಗಳಿದ್ದಲ್ಲಿ ತೆರವುಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಕಾಂತರಾಜು, ನಿವೃತ್ತ ಡಿಎಚ್‌ಒ ಡಾ.ಮರೀಗೌಡ, ಏಡ್ಸ್ ನಿಯಂತ್ರಣಾಧಿಕಾರಿ ಡಾ.ಆಶಾಲತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಹರ್ಷ ಇತರರಿದ್ದರು.