ಉಡುಪಿ: ಕ್ಯಾಸನೂರು ಅರಣ್ಯ ರೋಗ ಅಥವಾ ಮಂಗನ ಜ್ವರ ಸಾಮಾನ್ಯವಾಗಿ ನವೆಂಬರ್ನಿಂದ ಜೂನ್ವರೆಗೆ ಕಂಡುಬರುವ ಹಿನ್ನೆಲೆಯಲ್ಲಿ ಕಾಯಿಲೆ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಸೂಚನೆ ನೀಡಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೆ.ಎಫ್.ಡಿ ಹಾಗೂ ಇತರ ಪ್ರಾಣಿ ಜನ್ಯ ರೋಗ ತಡೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಮಾನ್ಯವಾಗಿ ಪಶ್ಚಿಮ ಘಟ್ಟ ಪ್ರದೇಶಗಳು ಹಾಗೂ ಮಲೆನಾಡು ಭಾಗದಲ್ಲಿ ಕ್ಯಾಸನೂರು ಅರಣ್ಯ ರೋಗವು ಹಲವು ವರ್ಷಗಳಿಂದ ಕಂಡು ಬರುತ್ತಿದೆ. ಜಿಲ್ಲೆಯಲ್ಲಿಯೂ ಕಾಡಂಚಿನ ಪ್ರದೇಶಗಳಲ್ಲಿ ಈ ರೋಗ ಕಂಡು ಬಂದಿದೆ. ಸಾಮಾನ್ಯವಾಗಿ ಜನರು ಉರುವಲುಗಳನ್ನು ತರಲು ಕಾಡಿಗೆ ಹೋಗಿ ಬಂದಾಗ ಅಥವಾ ಜಾನುವಾರುಗಳು ಕಾಡಿನಲ್ಲಿ ಮೇಯಲು ಹೋದಾಗ ಉಣ್ಣೆಗಳು ಕಚ್ಚಿದಾಗ ಈ ಕಾಯಿಲೆ ಬರುತ್ತದೆ. ಈ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು ಎಂದರು.
ಮಂಗ ಸತ್ತ ಜಾಗವನ್ನು ಹಾಟ್ ಸ್ಪಾಟ್ ಎಂದು ಗುರುತಿಸಿ, 2 ಕಿಮೀ ವ್ಯಾಪ್ತಿಯಲ್ಲಿ ಜ್ವರ ಇರುವ ಕುರಿತು ಸರ್ವೇ ನಡೆಸಲಾಗುವುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರೋಗ್ಯ ಸಮಿತಿ ಸಭೆಗಳನ್ನು ನಡೆಸಿ ಆರೋಗ್ಯ ಸುಧಾರಣೆ ಬಗ್ಗೆ ಪ್ರಚಾರ ಕೈಗೊಳ್ಳಬೇಕು. ಹೊರಗಿನಿಂದ ಬಂದ ಪ್ರವಾಸಿಗರಿಗೂ ಸಹ ಸೂಕ್ತ ಮಾಹಿತಿಗಳನ್ನು ಒದಗಿಸಬೇಕು. ಮಂಗನ ಜ್ವರ ಬಂದರೆ ಮೂರರಿಂದ ಐದು ದಿನ ತೀವ್ರ ತರಹದ ಜ್ವರ, ತೀವ್ರ ದೇಹನೋವು, ಕಣ್ಣು ಕೆಂಪಾಗುವುದು, ನೆಗಡಿ ಮತ್ತು ಕೆಮ್ಮಿನ ಲಕ್ಷಣಗಳು ಕಂಡುಬರುತ್ತವೆ ಎಂದರು.
ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಿನಲ್ಲಿ ಮಂಗಗಳು ಸತ್ತಿರುವುದು ಕಂಡುಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಜನರಿಗೆ ಅರಿವು ಮೂಡಿಸಲು ಹೆದ್ದಾರಿ ಫಲಕಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚು ಆಗುತ್ತಿವೆ. ಇವುಗಳ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ನಾಯಿ ಕಚ್ಚಿದವರಿಗೆ ಹಾಗೂ ಹಾವು ಕಚ್ಚಿದ ವ್ಯಕ್ತಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಲಸಿಕೆಗಳನ್ನು ಸಾಕಷ್ಟು ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ. ಗಡಾದ್, ಜಿಲ್ಲಾ ಸರ್ಜನ್ ಡಾ. ಎಚ್ ಅಶೋಕ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ, ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಪ್ರಶಾಂತ್ ಭಟ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.