ಮೈಸೂರು: ಮಾನವ ಮಂಟಪದ ವತಿಯಿಂದ ನಗರದ ಗೋಕುಲಂನ ಶ್ಯಾಗಲೆ ಹೌಸ್‌ನಲ್ಲಿ ಗುರುವಾರ ಪ್ರೇಮಿಗಳಾದ ಎಸ್.ಆರ್.ರಜನಿಕಾಂತ್ ಹಾಗೂ ಟಿ.ಆರ್.ಸುಷ್ಮಾ ಅವರ ಅಂತರ್ಜಾತಿ ವಿವಾಹ ಸರಳವಾಗಿ ನಡೆಯಿತು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರದ ಅರೆಕಾಲಿಕ ಉಪನ್ಯಾಸಕ ರಜನಿಕಾಂತ್ ದಲಿತರು. ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಎಂಎ ಓದಿರುವ ಸುಷ್ಮಾ ಅವರು ಒಕ್ಕಲಿಗರು. ರಜನಿಕಾಂತ್ ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕುದರಗುಂಡಿಯವರು. ಸುಷ್ಮಾ ಅವರು ಅದೇ ತಾಲೂಕಿನ ತೊರೆಶೆಟ್ಟಿಹಳ್ಳಿಯವರು.
ಇವರಿಗೆ ಕುವೆಂಪು ಅವರ ಮಂತ್ರ ಮಾಂಗಲ್ಯದ ವಿವಾಹ ಸಂಹಿತೆಯನ್ನು ಮಾನವ ಮಂಟಪದ ಸಂಚಾಲಕ ಡಾ.ಕಾಳಚನ್ನೇಗೌಡ ಬೋಧಿಸಿದರು. ನಂತರ ಅವರು ಮಾತನಾಡಿ, ಅಂತರ್ಜಾತಿ ಮದುವೆಯಾಗಿ ನೋಂದಣಿ ಮಾಡಿಸಿಕೊಂಡರೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ. ಸರಳ ಮದುವೆಯಾದರೂ ಪ್ರೋತ್ಸಾಹಧನ ಸಿಗಲಿದೆ ಎಂದರು.
ಅಂತರ್ಜಾತಿ ಮದುವೆಯಾದರೆ ಹಳ್ಳಿಗಳಲ್ಲಿ ದಂಡ ಹಾಕುತ್ತಾರೆ. ಆಗ ಪೊಲೀಸರಿಗೆ ಮಾಹಿತಿ ನೀಡಬೇಕು. ತೊಂದರೆಯಾದರೆ ಕಾನೂನಿನ ನೆರವು ಪಡೆಯಬಹುದು ಎಂದು ಸಲಹೆ ನೀಡಿದರು.
ಮಾನವ ಮಂಟಪದ ಮತ್ತೊಬ್ಬ ಸಂಚಾಲಕ ಉಗ್ರನರಸಿಂಹೇಗೌಡ ಮಾತನಾಡಿ, ಜಾತಿ ಎನ್ನುವ ಕಾರಣಕ್ಕೆ ಮದುವೆಗಳನ್ನು ವಿರೋಧಿಸುತ್ತಾರೆ. ಜೀವಗಳ ಬೆಲೆಯನ್ನು ಜಾತಿಗಳ ಆಧಾರದ ಮೇಲೆ ಅಳೆಯಲಾಗುತ್ತಿದೆ. ಇದಕ್ಕಾಗಿ ಜಾತಿ ಮೀರಿ ಮದುವೆಗಳಾಗಬೇಕು. ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಧನಂಜಯ ಎಲಿಯೂರು ಮಾತನಾಡಿ, ಅದ್ದೂರಿ ಮದುವೆಗಳಿಗೆ ಕಡಿವಾಣ ಹಾಕಬೇಕು. ಇದಕ್ಕಾಗಿ ಮಾನವ ಮಂಟಪವು ಸರಳವಾದ, ಅಂತರ್ಜಾತಿ ಮದುವೆಗಳನ್ನು ನೆರವೇರಿಸುವ ಮೂಲಕ ಉತ್ತೇಜನ ನೀಡುತ್ತದೆ ಎಂದರು. ರಜನಿಕಾಂತ್ ತಂದೆ ರಾಜು, ತಾಯಿ ಆಂಡಾಳಮ್ಮ, ಗೆಳೆಯರು ಹಾಜರಿದ್ದರು.