ಸಾಗರ: ಬೌದ್ಧಿಕ ಭಿನ್ನಾಭಿಪ್ರಾಯ ಹಾಗೂ ವಿಚಾರ ಸಂಘರ್ಷದಿಂದ ಬ್ರಾಹ್ಮಣ ಸಮುದಾಯ ಸಂಘಟಿತವಾಗುತ್ತಿಲ್ಲ ಎಂದು ಜಿಪಂ ಮಾಜಿ ಸದಸ್ಯ ಬಿ.ಆರ್.ಜಯಂತ್ ಹೇಳಿದರು.
ಭಾರತೀ ತೀರ್ಥ ಸಭಾಭವನದಲ್ಲಿ ಶನಿವಾರ ಕಾರ್ಯನಿರತ ಮತ್ತು ನಿವೃತ್ತ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಹಿರಿಯ ನೌಕರರಿಗೆ ಗೌರವ ಸಮರ್ಪಣೆ ಹಾಗೂ ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಅವಲೋಕನ, ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬ್ರಾಹ್ಮಣ ಸಮುದಾಯ ದೇಶಕ್ಕೆ ನೀಡಿದ ಕೊಡುಗೆ ಗಮನಾರ್ಹ. ಇಂತಹ ಚಿಂತನ-ಮಂಥನಗಳ ಮೂಲಕ ಸಮುದಾಯ ಸಂಘಟಿತವಾಗಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಕೆಲಸ ಮಾಡಬೇಕು. ಶಾಸಕ ಗೋಪಾಲಕೃಷ್ಣ ಬೇಳೂರು ಎಲ್ಲ ಸಮುದಾಯಗಳಿಗೂ ಸಂಕಷ್ಟದಲ್ಲಿದ್ದಾಗ ಸ್ಪಂದಿಸುತ್ತ ಬಂದಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಬಿ.ಆರ್.ಜಯಂತ್ ಬ್ರಾಹ್ಮಣ ಸಮುದಾಯದ ಹಿರಿಯರಾಗಿದ್ದು ರಾಜಕೀಯ ಸೇರಿದಂತೆ ಎಲ್ಲ ರಂಗಕ್ಕೂ ಕೊಡುಗೆ ನೀಡಿದ್ದಾರೆ. ಅಂಥವರಿಗೆ ಸೂಕ್ತ ಸ್ಥಾನಮಾನ ಸಿಗಬೇಕು ಎಂದು ಒತ್ತಾಯಿಸುವವರಲ್ಲಿ ನಾನೂ ಒಬ್ಬನಾಗಿದ್ದೇನೆ. ಮುಂದಿನ ದಿನಗಳಲ್ಲಿ ಅಂತಹ ಅವಕಾಶ ಅವರಿಗೆ ದೊರೆಯುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಸಮಾಜದ ಪ್ರಮುಖರು ಯಾವ ಪಕ್ಷದಲ್ಲಿದ್ದರೂ ಸಮುದಾಯದ ವಿಷಯ ಬಂದಾಗ ಎಲ್ಲರೂ ಒಟ್ಟಾಗಿ ಧ್ವನಿ ಎತ್ತಿ ಸಮಾಜವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸಬೇಕು. ಬ್ರಾಹ್ಮಣ ಸಮುದಾಯ ಅತ್ಯಂತ ನಿಷ್ಠೆಯಿಂದ ತನ್ನ ವ್ಯಾಪ್ತಿಯಲ್ಲಿ ಕೆಲಸ ಮಾಡಿಕೊಂಡು ಬರುತ್ತಿದೆ. ಸಮುದಾಯದ ಅಭಿವೃದ್ಧಿಗೆ ಶಾಸಕನಾಗಿ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಹುಟ್ಟಿದ ಸಮಾಜಕ್ಕೆ ಋಣ ತೀರಿಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ವೈ.ಮೋಹನ್, ಎಚ್.ಬಿ.ನಾಗರಾಜ್, ಸುರೇಶ್ ಎನ್.ಜವಳಿ, ಡಾ. ಕೆಳದಿ ವೆಂಕಟೇಶ್ ಜೋಯ್ಸ, ಎನ್.ಜಿ.ವಿನಾಯಕ ಜೋಯ್ಸ, ಎಚ್.ವಿ.ಲಲಿತಮ್ಮ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಶ್ರೀಧರ್ ಸಿ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು.
ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್, ಪ್ರಮುಖರಾದ ಅಬಸೆ ದಿನೇಶ್‌ಕುಮಾರ್ ಜೋಷಿ, ಎಚ್.ಕೆ.ಕೇಶವಮೂರ್ತಿ, ರವೀಶ್ ಕುಮಾರ್, ಅಚ್ಚುತ್ ರಾವ್, ಛಾಯಾಪತಿ, ಅಂಜನಾ, ಶ್ರೀಧರ ಹೆಗಡೆ, ಮ.ಸ.ನಂಜುಂಡಸ್ವಾಮಿ, ಡಾ. ಶಂಕರ್ ಶಾಸ್ತ್ರಿ, ಪ್ರಸನ್ನ, ನಾಗರಾಜ್, ಎಲ್.ಎಂ.ಹೆಗಡೆ ಇತರರಿದ್ದರು.