ಜಿಲ್ಲೆ

ಸಮಗ್ರ ತ್ಯಾಜ್ಯ ನಿರ್ವಹಣೆಗೆ ಹೆಚ್ಚು ಆದ್ಯತೆ: ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಹೇಳಿಕೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣೆಗಾಗಿ ಹೆಚ್ಚು ಆದ್ಯತೆ ನೀಡಲಾಗುತ್ತಿದ್ದು, ಅದಕ್ಕಾಗಿ ಸಾಕಷ್ಟು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಆಡಳಿತಾಧಿಕಾರಿ ಎಸ್.ಆರ್ ಉಮಾಶಂಕರ್ ತಿಳಿಸಿದರು.

ಬಿಬಿಎಂಪಿಯು ಸಿ40 ನಗರಗಳ ಸಹಯೋಗದಲ್ಲಿ ಹವಾಮಾನ ಕ್ರಿಯೆ ಕುರಿತು ವಿಕಾಸಸೌಧದಲ್ಲಿ ಸೋಮವಾರ ಆಯೋಜಿಸಿದ್ದ 2 ದಿನಗಳ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ನಗರದಲ್ಲಿ ಘನತ್ಯಾಜ್ಯದ ಸಮಸ್ಯೆ ನಿವಾರಿಸಲು ಸಾಕಷ್ಟು ಉಪಕ್ರಮ ಅಳವಡಿಸಿಕೊಂಡು ಅವುಗಳನ್ನೆಲ್ಲಾ ಜಾರಿಗೆ ತರಲಾಗುತ್ತಿದೆ. ಸಮಗ್ರ ತ್ಯಾಜ್ಯ ನಿರ್ವಹಣೆಗಾಗಿ ಪಾಲಿಕೆಯ ನಾಲ್ಕೂ ದಿಕ್ಕುಗಳಲ್ಲಿ 50ರಿಂದ 100 ಎಕರೆ ಜಾಗವನ್ನು ರಾಜ್ಯ ಸರ್ಕಾರವು ಗುರುತಿಸಿದ್ದು, ಸದರಿ ಜಾಗವನ್ನು ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.

ನಗರದಲ್ಲಿ ಹಸಿ ಹಾಗೂ ಒಣ ತ್ಯಾಜ್ಯವನ್ನು ಕಡ್ಡಾಯವಾಗಿ ವಿಂಗಡಿಸುವ ಕೆಲಸವಾಗಬೇಕು. ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕವನ್ನು ನಗರದಲ್ಲಿ ಸ್ಥಾಪಿಸಲಾಗುತ್ತಿದ್ದು, ಅದಕ್ಕೆ ಶೀಘ್ರ ಚಾಲನೆ ನೀಡಲಾಗುವುದು. ಪರಿಸರ ಮಾಲಿನ್ಯ ತಡೆಗೆ ಸಾಕಷ್ಟು ಯೋಜನೆ ರೂಪಿಸಿಕೊಂಡು ಅವುಗಳನ್ನು ಕಾರ್ಯರೂಪಕ್ಕೆ ತರಲಾಗುವುದು. ನಗರದಾದ್ಯಂತ ಹಸಿರೀಕರಣಕ್ಕೆ ಹೆಚ್ಚು ಆದ್ಯತೆ ನೀಡಬೇಕಿದ್ದು, ಮನೆ ಹಾಗೂ ಕಟ್ಟಡಗಳಲ್ಲಿ ಹರಿಸೀಕರಣಕ್ಕೆ ಆದ್ಯತೆ ನೀಡಿ ಸಸಿಗಳನ್ನು ನೆಟ್ಟು ಬೆಳಸುವಂತಾಗಬೇಕು ಎಂದು ವಿನಂತಿಸಿದರು.

100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿ:

ಬಿಬಿಎಂಪಿ, ಸಿ40 ನಗರಗಳು ಮತ್ತು ಸ್ಥಳೀಯ ಪಾಲುದಾರು, ಭಾರತದಾದ್ಯಂತ 15 ನಗರಗಳ ಅಧಿಕಾರಿಗಳು, ನಗರ ವೈದ್ಯರು, ಪರಿಣಿತ ಸಂಸ್ಥೆಗಳು ಮತ್ತು ಸ್ಥಳೀಯ ಪಾಲುದಾರರನ್ನು ಒಳಗೊಂಡಂತೆ 100ಕ್ಕೂ ಹೆಚ್ಚು ಪ್ರತಿನಿಧಿಗಳು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಾಗಾರದಲ್ಲಿ ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆಯ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್, ಬಿಎಸ್‌ಡಬ್ಲ್ಯುಎಂಎಲ್​​ನ ಮುಖ್ಯ ಕಾರ್ಯಚರಣೆ ಅಧಿಕಾರಿ ರಮಾಮಣಿ, ಮುಖ್ಯ ಇಂಜಿನಿಯರ್ ಬಸವರಾಜ್ ಕಬಾಡೆ, ಸಿ40 ಸಿಟೀಸ್ ಇಂಕ್ಲೂಸಿವ್ ಕ್ಲೈಮೇಟ್ ಆಕ್ಷನ್‌ನ ನಿರ್ದೇಶಕ ಜಾಜ್ಮಿನ್ ಬರ್ಗೆಸ್ ಸೇರಿ ಇನ್ನಿತರು ಉಪಸ್ಥಿತರಿದ್ದರು.

ಜಾಗತಿಕ ತಾಪಮಾನದಲ್ಲಿ ಸಾಕಷ್ಟು ಏರುಪೇರಾಗುತ್ತಿದ್ದು, ಇದರಿಂದ ಮಾಲಿನ್ಯದ ಮೇಲೆ ತುಂಬಾ ಪರಿಣಾಮ ಬೀರಲಿದೆ. ಎಲ್ಲರೂ ಸೇರಿ ಮಾಲಿನ್ಯವನ್ನು ನಿಯಂತ್ರಿಸಬೇಕು. ಇಲ್ಲವಾದಲ್ಲಿ ಯಾರಿಗೂ ಉಳಿಗಾಲವಿರುವುದಿಲ್ಲ. ನಗರದಲ್ಲಿ ಕಟ್ಟಡ ಭಗ್ನಾವಶೇಷಗಳನ್ನು ವಿಲೇವಾರಿ ಮಾಡುವ ಕ್ರಮವನ್ನು ನಾವು ಸರಿಪಡಿಸಬೇಕಿದೆ. ಎಲ್ಲೆಂದಲ್ಲಿ ಕಟ್ಟಡದ ಭಗ್ನಾವಶೇಷಗಳನ್ನು ಹಾಕುವುದರಿಂದ ವಾಯುಮಾಲಿನ್ಯ ಉಂಟಾಗುತ್ತದೆ. ಇದಕ್ಕೆ ಸೂಕ್ತ ರೀತಿಯ ಪ್ರಹಾರ ಕ್ರಮ ಕೈಗೊಳ್ಳಲಾಗುವುದು.

- ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ