ಬೆಂಗಳೂರು: ಆಯುರ್ವೇದ ಮತ್ತು ಆಧುನಿಕ ವೈದ್ಯ ಪದ್ಧತಿಗಳೆರಡರಲ್ಲೂ ಚಿಕಿತ್ಸೆ ನೀಡುತ್ತಿರುವ ಇಂಟಿಗ್ರೇಟೆಡ್ ವೈದ್ಯರಿಗೆ ತಮ್ಮ ಆಸ್ಪತ್ರೆ ಇಲ್ಲವೇ ಕ್ಲಿನಿಕ್ ಹೊರಭಾಗದಲ್ಲಿ ಹಸಿರು ಮತ್ತು ನೀಲಿ ಎರಡೂ ಬಣ್ಣಗಳನ್ನು ಹೊಂದಿರುವ ಬೋರ್ಡ್ ಪ್ರದರ್ಶಿಸುವಂತೆ ಸೂಚಿಸಿ ಆರೋಗ್ಯ ಇಲಾಖೆ ಆದೇಶಿಸಿದೆ.
ನಕಲಿ ವೈದ್ಯರ ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಈ ಹಿಂದೆ ಕೆಪಿಎಂಇ ನೋಂದಣಿ ಸಂಖ್ಯೆಯೊಂದಿಗೆ, ಅಲೋಪತಿ ಆಸ್ಪತ್ರೆಗಳು ನೀಲಿ ಬಣ್ಣ ಮತ್ತು ಆಯುರ್ವೇದ ಆಸ್ಪತ್ರೆಗಳು ಹಸಿರು ಬಣ್ಣದ ಬೋರ್ಡ್ ಪ್ರದರ್ಶಿಸುವಂತೆ ಸೂಚಿಸಲಾಗಿತ್ತು. ಹಾಗಾಗಿ ಇಂಟಿಗ್ರೇಟೆಡ್ ವೈದ್ಯರಿಗೂ ಬಣ್ಣ ಸೂಚಿಸುವಂತೆ ಸ್ಟೇಟ್ ರಿಜಿಸ್ಟರ್ಡ್ ಇಂಟಿಗ್ರೆಟೆಡ್ ಮೆಡಿಕಲ್ ಪ್ರಾಕ್ಟೀಷನರ್ಸ್ ಅಸೋಸಿಯೇಷನ್ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಿತ್ತು.
ಮನವಿ ಪರಿಶೀಲಿಸಿರುವ ಆರೋಗ್ಯ ಇಲಾಖೆ, ಪರಿಷೃತ ಆದೇಶದಲ್ಲಿ ಕರ್ನಾಟಕ ಆಯುರ್ವೇದಿಕ್ ಯುನಾನಿ ಪ್ರಾಕ್ಟೀಷನರ್ಸ್ ಬೋರ್ಡ್‌ನ ಇಂಟಿಗ್ರೇಟೆಡ್ ಷೆಡ್ಯೂಲ್‌ನಲ್ಲಿ ನೋಂದಾಯಿಸಲ್ಪಟ್ಟ ವೈದ್ಯರುಗಳನ್ನು ಇಂಟಿಗ್ರೇಟೆಡ್ ವೈದ್ಯರಗಳೆಂದು ಪರಿಗಣಿಸಿ, ಆಯುರ್ವೇದ ಮತ್ತು ಆಧುನಿಕ ವೈದ್ಯ ಪದ್ಧತಿಗಳೆರಡರಲ್ಲೂ ಚಿಕಿತ್ಸೆ ನೀಡಬಹುದಾಗಿರುವ ಈ ವೈದ್ಯರಿಗೆ ತಮ್ಮ ಸಂಸ್ಥೆಯ ಹೊರಭಾಗದಲ್ಲಿ ಶೇ.50 ಹಸಿರು ಹಾಗೂ ಶೇ.50 ನೀಲಿ ಬಣ್ಣ ಹೊಂದಿರುವ ಫಲಕ ಪ್ರದರ್ಶಿಸುವಂತೆ ಸೂಚಿಸಿ ಆದೇಶ ಹೊರಡಿಸಿದೆ.
ಆರೋಗ್ಯ ಇಲಾಖೆಯ ಈ ಆದೇಶಕ್ಕೆ ಕರ್ನಾಟಕ ಸ್ಟೇಟ್ ರಿಜಿಸ್ಟರ್ಡ್ ಇಂಟಿಗ್ರೇಟೆಡ್ ಮೆಡಿಕಲ್ ಪ್ರಾಕ್ಟೀಷನರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ಅರವಿಂದ್ ಪರಾಡ್ಕರ್ ಹಾಗೂ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.