* ಕೊಟ್ಟಿಗೆ, ಸಾವಯವ ಗೊಬ್ಬರಕ್ಕೆ ಒತ್ತು
* ಲಕ್ಷ್ಮೀಪುರದ ಎಲ್.ವಿ. ಶಿವರಾಜುಗೆ ಕುಟುಂಬವೇ ಬಲ
*ತೋಟಗಾರಿಕಾ ಬೆಳೆಯಲ್ಲೂ ಯಶಸ್ಸು
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಸಮಗ್ರ ಕೃಷಿ ಜತೆಗೆ ಉಪ ಕಸುಬು ಅಳವಡಿಸಿಕೊಂಡು ಕೃಷಿಯಲ್ಲೇ ಲಾಭ ಕಂಡುಕೊಂಡು ಯಶಸ್ವಿನತ್ತ ಸಾಗಿದ್ದಾರೆ ರಾಮನಗರ ತಾಲೂಕಿನ ಕೂಟಗಲ್ ಹೋಬಳಿಯ ಲಕ್ಷ್ಮೀಪುರ ಗ್ರಾಮದ ಎಲ್.ವಿ. ಶಿವರಾಜು.
ಕೃಷಿ ಜತೆಗೆ ಉಪ ಕಸುಬಾಗಿ ನಾಟಿಕೊಳಿ ಸಾಕಣೆ ಮಾಡುತ್ತಿದ್ದು, ಒಂದು ಭಾರಿಗೆ 700 ರಿಂದ 800 ನಾಟಿ ಕೋಳಿ ಸಾಕಣೆ ನಡೆಸಿ ಉತ್ತಮ ಆದಾಯ ಕಂಡುಕೊಂಡಿದ್ದಾರೆ. ಜತೆಗೆ ಟಗರು ಸಾಕುತ್ತಿದ್ದಾರೆ. ವಿಶೇಷವಾಗಿ ಗೀರ್ ತಳಿಯ ಹಸು ಸಾಕಿದ್ದು, ಅದರಿಂದ ಉತ್ತಮ ಹಾಲು ಪಡೆಯುತ್ತಿದ್ದಾರೆ. ಮಿಶ್ರತಳಿ ಹಸುಗಳೂ ಇವೆ.
ಕೃಷಿಹೊಂಡ: ವಿದ್ಯುತ್ ಇಲ್ಲದ ಸಮಯದಲ್ಲಿ ಕೃಷಿಗೆ ನೀರೋದಗಿಸಲು ಕೃಷಿ ಹೊಂಡ ನಿರ್ಮಾಣ ಮಾಡಿದ್ದು, ಸದಾ ತೋಟ ಹಸಿರಾಗಿರಿಸಿಕೊಳ್ಳಲು ಈ ಹೊಂಡ ಸಹಕಾರಿಯಾಗಿದೆ.
2 ಎಕರೆ ಬಾಳೆ ಬೆಳೆ: ಸುಮಾರು 2 ಎಕರೆ ವಿಸ್ತೀರ್ಣದಲ್ಲಿ ಬಾಳೆ ಬೆಳೆಯುತ್ತಿದ್ದು, ರೋಗ ನಿರೋಧಕವಾಗಿ ಗಿಡ ಬೆಳೆಸಿರುವ ಜತೆಗೆ ಕಾಯಿಗಳನ್ನು ರೋಗದಿಂದ ಕಾಪಾಡಲೂ ವೈಜ್ಞಾನಿಕ ರೀತಿಯಲ್ಲಿ ಕೃಷಿ ನಡೆಸಿ ಹೆಚ್ಚಿನ ಫಸಲಿನೊಂದಿಗೆ ಲಾಭವನ್ನು ಪಡೆಯುತ್ತಿದ್ದಾರೆ.
ಎಲ್ಲ ದಿನಗಳಲ್ಲೂ ಬಟನ್ಸ್ ಹೂವಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದು, ಬಟನ್ಸ್ ಹೂವವನ್ನು ಬೆಳೆಯುತ್ತಿದ್ದಾರೆ. ಇವರ ತೋಟದಲ್ಲಿ 40 ವರ್ಷದ ಸೆಂಧೂರ, ರಸಪೂರಿ ಮಾವಿನಮರಗಳಿವೆ. ಹಳೇ ಮರಗಳಾಗಿದ್ದ ಕಾರಣ ಫಸಲು ಇಲ್ಲವಾಗಿತ್ತು. ತೋಟಗಾರಿಕಾ ವಿಜ್ಞಾನಿಗಳ ಮಾಹಿತಿ ಪಡೆದು ಮಾವಿನ ಮರಗಳಿಗೆ ಹಳೇ ಮರ ಕಟ್ ಮಾಡಿಸಿ ಅದೇ ಮರದ ರೆಂಬೆಗಳಿಗೆ ಬಾದಾಮಿ ಕಸಿ ಮಾಡಿಸಿದ ಪರಿಣಾಮ ಈಗ ಉತ್ತಮ ಫಸಲು ನೀಡುತ್ತಿವೆ.
ವಿಶೇಷವಾಗಿ ಒಂದೇ ಮರಕ್ಕೆ ನಾಲ್ಕು ತರ ಜಾತಿಯ ಮಾವು ಗಿಡಗಳನ್ನು ಕಸಿ ಮಾಡಿ ಒಂದೇ ಮರದಲ್ಲಿ ನಾಲ್ಕು ಜಾತಿಯ ಮಾವಿನ ಹಣ್ಣುಗಳನ್ನು ಪಡೆಯುತ್ತಿದ್ದಾರೆ. ಸ್ವಂತವಾಗಿ ಯಾರ ಆಶ್ರಯ ಇಲ್ಲದೆ ಮಾವಿನ ಮರಗಳಿಗೆ ಕಸಿ ಮಾಡುವುದು ವಿಶೇಷ.
ಮಲೆನಾಡು ಸೇರಿ ರಾಜ್ಯದ ಇನ್ನಿತರ ಕೆಲವೇ ಭಾಗಕದಲ್ಲಿ ಸೀಮಿತಗೊಂಡಿರುವ ಮೆಣಸು ಬೆಳೆಯನ್ನು ರಾಮನಗರ ಜಿಲ್ಲೆಯಲ್ಲಿ ಇತ್ತೀಚೆಗೆ ಕೆಲವು ರೈತರು ಬೆಳೆಯಲು ಮುಂದಾಗಿದ್ದಾರೆ. ಅವರ ಸಾಲಿನಲ್ಲಿ ಶಿವರಾಜು ಕೂಡ ಒಬ್ಬರು. ತೆಂಗು ಮತ್ತು ಅಡಕೆ ತೋಟದಲ್ಲಿ ಆ ಮರಗಳಿಗೆ ಆಶ್ರಯವಾಗಿ ಮೆಣಸು ಬೆಳೆಯುತ್ತಿದ್ದಾರೆ. ಹಾಸನದ ನೆಂಟರ ಮನೆಗೆ ಹೋದಾಗ ಅಲ್ಲಿ ಬೆಳೆಯುತ್ತಿದ್ದ ಮೆಣಸು ಕೃಷಿ ನೋಡಿ ಅಲ್ಲಿಂದ ಮೆಣಸು ಸಸಿ ತಂದು ಬೆಳೆ ಆರಂಭಿಸಿ ಇಂದು ನೂರಾರು ಕೆಜಿ ಮೆಣಸು ಬೆಳೆಯುತ್ತಿದ್ದಾರೆ. ಜತೆಗೆ ಏಲಕ್ಕಿಯನ್ನೂ ಬೆಳೆಯಲು ಮುಂದಡಿ ಇಟ್ಟು ಲಾಭ ಕಾಣುತ್ತಿದ್ದಾರೆ.
ಹಲವು ವರ್ಷಗಳಿಂದ ಒಂದೊಂದೇ ವಿಶೇಷ ಬೆಳೆ ಬೆಳೆಯುವ ಮೂಲಕ ಕೃಷಿ ಚಟುವಟಿಕೆ ಪ್ರಾರಂಭಿಸಿ ಈಗ ಜಮೀನಿನಲ್ಲಿ ಹತ್ತಾರು ಬೆಳೆ ಬೆಳೆದು ನಿಲ್ಲುವಂತೆ ಯಶಸ್ವಿ ಕಂಡಿದ್ದಾರೆ. ಬೆಣ್ಣೆಹಣ್ಣು (ಬಟರ್ ಫ್ರೂಟ್), ಮೋಸಂಬಿ, ಚಕ್ಕೋತ, ಕಿತ್ತಳೆ, ಎಗ್‌ರ್ೂಟ್ ಸೇರಿ ಹಣ್ಣುಗಳನ್ನು ತೋಟದಲ್ಲಿ ಬೆಳೆಸಿದ್ದಾರೆ.
ಪ್ರಗತಿಪರ ರೈತ ಶಿವರಾಜು ಅವರ ಯಶಸ್ವಿ ಕೃಷಿ ಕಂಡು ಆದಿಚುಂಚನಗಿರಿ ಮಠದಿಂದ ಕಳೆದ ವರ್ಷ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ. ರಾಮನಗರದ ರೋಟರಿ ಸಿಲ್ಕ್ ಸಿಟಿ ಮತ್ತು ಸಾಕಷ್ಟು ಸಂಘ-ಸಂಸ್ಥೆಗಳು ಗೌರವಿಸಿವೆ.