ಎಲ್.ಚಂದ್ರಶೇಖರ ಹೊಳೆನರಸೀಪುರ
ಬೆಂಗಳೂರಿನ ಪ್ರಿಂಟಿಂಗ್ ಪ್ರೆಸ್ ಉದ್ಯಮ ಬಿಟ್ಟು ತೋಟಗಾರಿಕಾ ಬೇಸಾಯದ ಮೂಲಕ ಉಣ್ಣೇನಹಳ್ಳಿ ಗ್ರಾಮದ ಹೊಯ್ಸಳ ಎಸ್.ಅಪ್ಪಾಜಿ ಯಶಸ್ಸು ಕಂಡಿದ್ದಾರೆ.
ತಾಲೂಕಿನ ಹಳೆಕೋಟೆ ಹೋಬಳಿಯ ಉಣ್ಣೆನಹಳ್ಳಿ ಗ್ರಾಮದ ರತ್ನಾಂಬಿಕೆ, ಸಿ ಸಿದ್ದಪ್ಪಾಜಿ ದಂಪತಿಯ ಪುತ್ರ ಹೊಯ್ಸಳ ಎಸ್. ಅಪ್ಪಾಜಿ ಡಿಪ್ಲೊಮಾ ಪ್ರಿಂಟಿಂಗ್ ಟೆಕ್ನಾಲಜಿ ಮಾಡಿ ಬೆಂಗಳೂರಿನಲ್ಲಿ ಸ್ವಂತ ಪ್ರಿಂಟಿಂಗ್ ಪ್ರೆಸ್ ಆರಂಭಿಸಿದ್ದರು. ಬಿಡುವಿಲ್ಲದ ದುಡಿಮೆ, ಹೆಚ್ಚು ಒತ್ತಡ, ಜಂಜಾಟಕ್ಕೆ ಬೇಸತ್ತು ಬೇಸಾಯದತ್ತ ಮುಖಮಾಡಿ ಯಶಸ್ವಿಯಾಗಿದ್ದಾರೆ.
ಪ್ರಿಟಿಂಗ್ ಪ್ರೆಸ್ ಮಾರಾಟದ ಹಣದಿಂದ ಊರಿನಲ್ಲಿ ನಾಲ್ಕು ಎಕರೆ ಜಮೀನು ಖರೀದಿಸಿ ಪಿತ್ರಾರ್ಜಿತ 5 ಎಕರೆ ಸೇರಿ 9 ಎಕರೆ ಜಮೀನಿನಲ್ಲಿ ವಿವಿಧ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ. ತಮ್ಮ ಕೃಷಿ ಅನುಭವ, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಎರಡು ಎಕರೆ ಜಾಗದಲ್ಲಿ ಅಡಕೆ, ನಾಲ್ಕು ಎಕರೆ ಜಾಗದಲ್ಲಿ ತೆಂಗು, ಒಂದೂವರೆ ಎಕರೆಯಲ್ಲಿ ಹೈಬ್ರಿಡ್ ತೆಂಗು, ಒಂದು ಎಕರೆಯಲ್ಲಿ ಸಪೋಟ, ಉಳಿಕೆ ಜಮೀನಿನಲ್ಲಿ ವಿವಿಧ ತಳಿಯ ಬೆಳೆಗಳನ್ನು ಬೆಳೆದು ಲಾಭದ ದಾರಿ ಕೊಂಡುಕೊಂಡಿದ್ದಾರೆ.
ಮಂಡ್ಯದಲ್ಲಿರುವ ಲೋಕ ಸಾರ ತೆಂಗು ಸಂಶೋಧನಾ ಕೇಂದ್ರದಿಂದ ಹೈಬ್ರಿಡ್ ತೆಂಗಿನ ಸಸಿ ತಂದು ಬೆಳೆಸಿದ್ದಾರೆ. ಸಿಹಿಯಾದ ಎಳನೀರು ನೀಡುವ ಫಸಲು ರೈತರಿಗೆ ವರದಾನವಾಗಿದೆ ಎನ್ನುತ್ತಾರೆ ಹೊಯ್ಸಳ.
ಎರಡು ಎಕರೆ ಅಡಕೆ ತೋಟದಲ್ಲಿ ಎರಡು ಬಗೆಯ ತಳಿಗಳನ್ನು ಬೆಳೆಸಿದ್ದಾರೆ. ಪಶ್ಚಿಮ ಬಂಗಾಳದ ಮೋಹಿತ್ ನಗರ್ ಟಾಲ್ ತಳಿಯ 250 ಅಡಕೆ ಗಿಡಗಳನ್ನು ಬೆಳೆಯಲಾಗಿದೆ. ತುಮಕೂರು ಜಿಲ್ಲೆಯ ಹಿರೇಹಳ್ಳಿ ಅಡಕೆ ಸಂಶೋಧನಾ ಕೇಂದ್ರದಿಂದ ಸಸಿ ತಂದು ಬೆಳೆಸಲಾಗಿದೆ. ಸಪೋಟದಲ್ಲಿ ಕ್ರಿಕೆಟ್ ಬಾಲ್ ಸಪೋಟ, ಧಾರವಾಡ ಹೈಬ್ರಿಡ್ ಸಪೋಟ, ಮಾವು ತಳಿಗಳಾದ ಆಮ್ರಪಾಲಿ, ಲಂಗಡ, ಮಲ್ಲಿಕಾ, ಬಾದಾಮಿ, ರತ್ನ, ಸೈಂದೂರ, ರಾಜರಸ್ಪುರಿ, ತಶೈರಿ, ಎಚ್ 13, ಎಚ್ 16, ಕಾಲಪ್ಪಾಡಿ, ಇಮಾಮ್ ಪಸಂದ್, ಸಿಂಧು, ವರ್ಣರೇಖಾ ಬೆಳೆಗಳನ್ನು ಬೆಳೆದಿದ್ದಾರೆ.
ನಿಂಬೆಯಲ್ಲಿ ಕಾಗಜಿ, ಇಟಾಲಿಯನ್, ಮಾದಳ, ಕೆಂಪು ನಿಂಬೆ, ದೇವನಹಳ್ಳಿ ಚಕ್ಕೋತಾ, ಥೈಲ್ಯಾಂಡ್ ಚಕ್ಕೋತಾ, ಹಲಸು, ಬಟರ್ ಫ್ರೂಟ್, ಹಿರಳಿ ಗಿಡ, ಸೀಬೆಯಲ್ಲಿ ಅಲಹಾಬಾದ್ ಸೌದ್, ಥೈಲ್ಯಾಂಡ್ ಮೃದುಲ್ಲಾ, ಐಎಎಎಚ್‌ಆರ್ ತಳಿಗಳು, ಸೀತಾ ಫಲ, ರಾಮ ಫಲ, ಲಕ್ಷ್ಮಣ ಫಲ, ಹನುಮಾನ್ ಫಲ, ಅತ್ತಿ ಮೋನಾ ಕೊಡಗಿನ ತಳಿ, ಬಾಲ್ನಗರ್ ಮಧ್ಯಪ್ರದೇಶ ತಳಿ, ಗೋಲ್ಡನ್ ತಳಿ ಕಾಶ್ಮೀರಿ, ಕಂರಾಕ್ಷಿ, ನೋನಿ, ಪಪ್ಪಾಯಿ, ಕರಿಬೇವು, ಧಾರವಾಡ ಯೂನಿವರ್ಸಿಟಿಯ ಸುಹಾಸಿನಿ ಕರಿಬೇವು ತಳಿ, ರೋಜಾ ಆ್ಯಪಲ್, ಪನ್ನೇರಳೆಯಲ್ಲಿ ಕೃಷ್ಣಗಿರಿ, ದೂಪಡಾಳ್, ಬಿ 87 ತಳಿಗಳು, ಪಿನಟ್, ಬೆಣ್ಣೆ ಹಣ್ಣು, ಬಾಳೆಯಲ್ಲಿ ಪುಟ್ಟ ಬಾಳೆ, ಮಂಗನ ಬಾಳೆ, ಬೂದುಬಾಳೆ, ಮೆಣಸು, ವೀಳ್ಯದೆಲೆ, ನಾಲ್ಕು ಜಾತಿಯ ಜಾಯಿಕಾಯಿ ಮರಗಳನ್ನು ಬೆಳೆಸುತ್ತಿದ್ದಾರೆ. ಮೂರು ತಳಿಯ ದಾಲ್ ಚಿನ್ನಿ, ಚಕ್ಕೆ ಹುಣಸೇಮರ, ಏಲಕ್ಕಿ, ತೇಗ ಹೀಗೆ ವಿವಿಧ ತೋಟಗಾರಿಕಾ ಬೆಳೆಗಳನ್ನು ತಮ್ಮ ತೋಟದಲ್ಲಿ ಬೆಳೆಯುವ ಮೂಲಕ ಮಾದರಿ ಬೇಸಾಯಗಾರರಾಗಿದ್ದಾರೆ. ಜತೆಗೆ ಒಂದು ಎಕರೆ ಗದ್ದೆಯಲ್ಲಿ ರಾಜಮುಡಿ ಭತ್ತವನ್ನು ಬೆಳೆಸಿದ್ದಾರೆ.
ಸ್ಪ್ರಿಂಕ್ಲರ್ ವ್ಯವಸ್ಥೆ
9 ಎಕರೆ ಜಮೀನಿನಲ್ಲಿ ಬೆಳೆದಿರುವ ವಿವಿಧ ಕೃಷಿ ತೋಟಗಾರಿಕಾ ಬೆಳೆಗಳಿಗೆ ನೀರುಣಿಸಲು ವಿವಿಧ ಮಾದರಿಯ ನೀರಿನ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ನೀರಿನ ವ್ಯವಸ್ಥೆಗೆ ಒಂದು ಕೊಳವೆ ಬಾವಿ ಇದೆ. ಮಳೆ ನೀರು ಶೇಖರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದರಲ್ಲಿ 25ಸಾವಿರ ಲೀಟರ್ ಮಳೆ ನೀರು ಸಂರಕ್ಷಣೆ ಮಾಡಲಾಗುತ್ತಿದೆ.
ಸಾವಯವ ಪದ್ಧತಿ ಅಳವಡಿಕೆ
ಜಮೀನಿನಲ್ಲಿ ಬೆಳೆದ ಬೆಳೆಗಳಿಗೆ ರಾಸಾಯನಿಕ ಗೊಬ್ಬರ, ಔಷಧ ಸಿಂಪಡಿಸದೆ ಸಾವಯವ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಗೊಬ್ಬರ ಬಳಕೆಗಾಗಿ ಏಳು ಮಲೆನಾಡ ಗಿಡ್ಡ ಹಸುಗಳನ್ನು ಸಾಕಲಾಗಿದೆ. ಜೀವಾಮೃತ, ಗೋಕೃಪಾಮೃತ ಹಾಗೂ 75 ಸಾವಿರ ಲೀಟರ್ ಸಾಮರ್ಥ್ಯದ ಬಯೋಡೈಜೆಸ್ಟರ್ ನಿರ್ಮಿಸಿಕೊಳ್ಳಲಾಗಿದೆ.
ತೆಂಗಿನ ಮರದ ಬುಡ ತಂಪಾಗಿರಲು ಗರಿಗಳನ್ನು ಕತ್ತರಿಸಿ ಹರಡುವ ಮೂಲಕ ಹೆಚ್ಚು ನೀರು ಬಳಕೆಯಾಗದಂತೆ ನೋಡಿಕೊಳ್ಳಲಾಗಿದೆ. ತೋಟದಲ್ಲಿ ಹಸಿರೆಲೆ ಗೊಬ್ಬರವನ್ನು ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷ ಹಸಿರೆಲೆ ಕಡಿದು ಜಮೀನಿಗೆ ಹರಡಲಾಗುತ್ತದೆ. ಇದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ ಹಾಗೂ ಭೂಮಿಯಲ್ಲಿ ಜೀವಾಣುಗಳು ಅಧಿಕವಾಗಿ ಉತ್ಪತ್ತಿಯಾಗಿ ಬೆಳೆಗಳಿಗೆ ಸಹಕಾರವಾಗುತ್ತದೆ.
ವಾರ್ಷಿಕ 6 ಲಕ್ಷ ರೂ. ಆದಾಯ
ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಸೌಲಭ್ಯಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಬೇಸಾಯ ಮಾಡಲಾಗುತ್ತಿದೆ. ಪ್ಯಾಕ್ ಹೌಸ್, ಪವರ್ ಟಿಲ್ಲರ್, ಸ್ಪಿಂಕ್ಲರ್ ಸೌಲಭ್ಯಗಳನ್ನು ಪಡೆದುಕೊಂಡು ಬೇಸಾಯಕ್ಕೆ ಬಳಸಲಾಗುತ್ತಿದೆ. ತಮ್ಮ ತೋಟದಲ್ಲಿ ಬೆಳೆದಿರುವ ಬೆಳೆಗಳಿಂದ ವರ್ಷದಲ್ಲಿ ಸುಸ್ಥಿರ ಆದಾಯ ಪಡೆಯುತ್ತಿದ್ದು, ವಾರ್ಷಿಕ 6 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ತಾವೇ ಜಮೀನಿನಲ್ಲಿ ಕಾಯಕ ಮಾಡುತ್ತಾರೆ. ಅವಶ್ಯಕತೆ ಇದ್ದಾಗ ಮಾತ್ರ ಆಳುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಹಾಸನದ ಆಕಾಶವಾಣಿಯಿಂದ ಬಿತ್ತರವಾಗುವ ಕೃಷಿ ಮಾಹಿತಿ ಪಡೆದು ಪ್ರೇರಿತರಾಗಿದ್ದಾರೆ. ಅಲ್ಲದೆ ಪರಿಸರ ಪ್ರಿಯ ಕೃಷಿಕರ ಸಂಘ ಕಟ್ಟಿಕೊಂಡು ಇತರ ರೈತರ ತೋಟದಲ್ಲಿ ಕಾರ್ಯಕ್ರಮ ನಡೆಸಿ ಕೃಷಿ ಅನುಭವ ಪಡೆದುಕೊಳ್ಳಲಾಗುತ್ತಿದೆ. ಕೃಷಿ ಹಾಗೂ ತೋಟಗಾರಿಕೆ ಸಮ್ಮೇಳನಗಳಲ್ಲಿ ಭಾಗಿಯಾಗಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.
ಹಲವು ಪ್ರಶಸ್ತಿಗಳು
ಹೊಯ್ಸಳ ಎಸ್.ಅಪ್ಪಾಜಿ ಅವರಿಗೆ ಕೃಷಿ ಇಲಾಖೆಯಿಂದ ಕೃಷಿ ಪಂಡಿತ, ಜಿಕೆವಿಕೆ ಕೃಷಿ ವಿಶ್ವವಿದ್ಯಾನಿಲಯದಿಂದ ರಾಜ್ಯಮಟ್ಟದ ಎಚ್.ಡಿ.ದೇವೇಗೌಡ ಪ್ರಶಸ್ತಿ ಸೇರಿದಂತೆ ಅನೇಕ ಉತ್ತಮ ರೈತ ಪ್ರಶಸ್ತಿ ಸನ್ಮಾನಗಳು ಲಭಿಸಿವೆ.